Saturday, April 6, 2013

ಬಂಡವಾಳಶಾಹಿ ತತ್ವದ ನಿರಂತರತೆ?


ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.

ಅಂದು ವೇದಿಕೆಯ ಮೇಲೆ ಕೂತಿದ್ದವರನ್ನು ನಾನು ಅವಲೋಕಿಸಿದೆ. ಇದ್ದ ಐದು ಜನರಲ್ಲಿ ಇಬ್ಬರು ವ್ಯಾಪಾರ ಜಗತ್ತಿನಿಂದ ಬಂದವರು. ಇಬ್ಬರು ಸಮಾಜಸೇವೆ - ಜನರನ್ನೊಳಗೊಳ್ಳುನ ವಿಕಾಸವಾದವನ್ನು ಪ್ರತಿಪಾದಿಸುವವರು. ಐದನೆಯವನು - ಯಾವ ಕಡೆ ವಾಲಿದ್ದೇನೆಂದು ತಿಳಿಯದ ನಾನು.
ಈ ಗಹನ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು. ಈ ಲೋಕದಿಂದ ಅನಾಮಾನ್ಯತೆಯನ್ನು ಅಟ್ಟುವುದು ಎಷ್ಟು ಅಸಾಧ್ಯವೋ, ಬಂಡವಾಳಶಾಹಿ ವ್ಯಾಪಾರ ಸೂತ್ರಗಳನ್ನು ಕಿತ್ತೊಗೆಯುವುದು ಅಷ್ಟೇ ಕಷ್ಟದ, ಸಾಧಿಸಲಾಗದ ಮಾತು. ಇದು ಕೇಂದ್ರದ ಎಡಗಡೆಗೆ ವಾಲಿದ ಆ ಇಬ್ಬರಿಗೂ ಗೊತ್ತು. ಹಾಗೇ ಬಲಗಡೆಗೆ ವಾಲಿದ, ಜೀವನ ಸೂತ್ರವೇ ವ್ಯಾಪಾರಶಾಹೀತನವನ್ನು ನಂಬಿ ಬದುಕುತ್ತಿರುವ ಇನ್ನಿಬ್ಬರಿಗೂ ಗೂತ್ತು. ಅದೇ ಅವರ ಜೀವನ ಧರ್ಮವೂ ಆಗಿತ್ತು. ಹೀಗೆ ಸೆಮಿನಾರನ್ನು ರೂಪಿಸಿ, ಎಡಪಂಥದತ್ತ ವಾಲಿದವರಿಂದ, ಮಾರುಕಟ್ಟೆಯ ಸೂತ್ರಗಳನ್ನು ಒಂದಿಲ್ಲೊಂದು ರೀತಿಯಿಂದ ಟೀಕಿಸುತ್ತಿರುವ ನಮ್ಮಿಂದ - ಬಂಡವಾಳಶಾಹಿ ವ್ಯಾಪಾರವಿಲ್ಲದೇ ಬದುಕು ನಡೆಯದೆಂದು ಹೇಳಿಸಬೇಕೆನ್ನುವ ದುಷ್ಟ ಹುನ್ನಾರ ನಮ್ಮ ವಿದ್ಯಾರ್ಥಿಗಳದ್ದಿರಬಹುದೇ ಅನ್ನುವ ಅನುಮಾನವೂ ನನ್ನನ್ನು ಕಾಡದಿರಲಿಲ್ಲ.

ವೇದಿಕೆಯನ್ನೇರಲು ಒಪ್ಪಿದ್ದರಿಂದ ಈ ಬಗ್ಗೆ ಗಹನವಾಗಿ ಆಲೋಚಿಸುವ ಅನಿವಾರ್ಯತೆ ನಮ್ಮನ್ನೆಲ್ಲ ಸುತ್ತಿಕೊಂಡಿತ್ತು. ಸಮಾಜವಾದ, ಕಮ್ಯುನಿಸಂಗಳ ಪ್ರಯೋಗದ ವಿಫಲತೆ-ಸಾಫಲ್ಯವನ್ನು ವಿಶ್ವದ ಅನುಭವದ ಆಧಾರದ ಮೇಲೆ ಗಮನಿಸಿದಾಗ - ಮುಖ್ಯವಾಗಿ ಎಡಪಂಥೀಯ ವಿಚಾರಧಾರೆಯನ್ನು ಅಳವಡಿಸಿ ನಡೆದ ಸೋವಿಯತ್ ರಷ್ಯಾ, ಪೂರ್ವ ಯೂರೋಪ್, ಹಾಗೂ ಆ ವಿಚಾರಧಾರೆಯನ್ನು ಪ್ರತಿಪಾದಿಸುತ್ತಿದ್ದೇವೆಂದು ಘೋಷಿಸುತ್ತಾ ಮುಂದುವರೆವ ಚೀನಾ, ಹಾಗೂ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಸರಕಾರಗಳ ಸೂತ್ರಗಳನ್ನು ಗಮನಿಸಿದಾಗ ಎಡಪಂಥೀಯ ವಿಚಾರಧಾರೆಯ ಬಗ್ಗೆ ಅನುಮಾನ ಬರುವುದು ಅದರ ಮಿತಿಗಳ ಬಗ್ಗೆ ಮನವರಿಕೆಯಾಗುವುದು ಸಹಜವೇ ಆಗಿತ್ತು.




ಆದರೆ ಇತ್ತ ವ್ಯಾಪಾರವಾದವನ್ನೂ ಆರಾಧಿಸದೇ, ಕಮ್ಯುನಿಸಂನ ಪ್ರತಿಪಾದಿಸದೇ ನೆಹರೂ ಪ್ರೇರಿತ ಸಮಾಜವಾದದ ಮಧ್ಯದಾರಿಯನ್ನು ಹಿಡಿದು ಹೊರಟರೆ, ಅರ್ಧ ಮಾರುಕಟ್ಟೆ, ಅರ್ಧ ಸರಕಾರಿ ಪ್ರೇರಿತ ವಿಕಾಸದ ದಾರಿಯಲ್ಲಿ ಹೋಗುವುದೂ ಕಷ್ಟದ ಮಾತೇ. ಅಮೆರಿಕದ ನಾಯಕತ್ವದಲ್ಲಿ ಅಳವಡಿಸಿಕೊಂಡ ವ್ಯಾಪಾರಶಾಹಿ ಸೂತ್ರಗಳ ಆಧಾರದ ಮೇಲೆ ನಡೆಸುತ್ತಿದ್ದ ವಿತ್ತೀಯ ಕ್ಷೇತ್ರ ವ್ಯಾಪಾರಿಗಳ ಅತಿಯಾಸೆ ಮತ್ತು ಲೋಲುಪತೆಗಳ ಫಲವಾಗಿ ತತ್ತರಿಸುತ್ತಿದ್ದಾಗ - ರಾಷ್ಟ್ರೀಕೃತ ಬ್ಯಾಂಕುಗಳ ನೇತೃತ್ವದಲ್ಲಿ ಸರಕಾರಿ ಭಾಗಸ್ವಮ್ಯದಲ್ಲಿ ನಡೆಯುತ್ತಿದ್ದ ಭಾರತೀಯ ವಿತ್ತೀಯ ಕ್ಷೇತ್ರ - ಯಾವ ವಿಕ್ಷೊಭಕ್ಕೂ ಒಳಗಾಗದೇ ವಿಶ್ವದಲ್ಲಿಯೇ ಒಂದು ಮಾದರಿಯಾಗಿ ನಿಂತುಬಿಟ್ಟಿತ್ತು. ಇದಕ್ಕೆ ಸಲ್ಲಬೇಕಾದ ಕೀರ್ತಿ ತಮ್ಮದೆಂದು ನಮ್ಮ ದೇಶದ ಎಡಪಂಥೀಯ ಪಕ್ಷಗಳು ಹೇಳಿಕೆಗಳನ್ನು ಕೊಟ್ಟದ್ದೂ ಉಂಟು. ಆದರೆ ಇದೊಂದು ಯಶಸ್ವೀ ಮಾರ್ಗವೆಂದು ಇದನ್ನು ನಂಬುವ ಮೊದಲೇ, ಸರಕಾರೀ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಏರ್ ಇಂಡಿಯಾ ಮಾರುಕಟ್ಟೆಯ ಪೈಪೋಟಿಯನ್ನು ತಡೆಯಲಾಗದೇ ಸರಕಾರೀ ಕವಚವಿದ್ದೂ ತೇಲಲಾಗದೇ ಅಧೋಗತಿಗಿಳಿದಿದ್ದನ್ನೂ ನಾವು ನೋಡಿದ್ದವು. ಹೀಗಾಗಿ ಈ ವಾದದಲ್ಲಿ ಎರಡರಲ್ಲೊಂದು ಪಕ್ಷ ಹಿಡಿದು ವಾದಿಸುವುದರಲ್ಲಿ ಅಪಾಯವೇ ಇತ್ತು.

ಹಾಗೆ ನೋಡಿದರೆ ಉತ್ತಮ ಪರಿಸರಕ್ಕಾಗಿ ಹೋರಾಡುವ ಪರಿಸರವಾದಿ ಕಾರ್ತಿಕೇಯ ಸಾರಾಭಾಯಿಗೂ, ಬಂಡವಾಳ ಹೂಡಿ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ನದಿಯಲ್ಲಿ ಹರಿಯಬಿಡಬಹುದಾದ ಉದ್ಯೋಗಪತಿಗೂ, ಮೂಲಭೂತ ವ್ಯತ್ಯಾಸ ಎಲ್ಲಿದೆ? ಯಾವ ವ್ಯಾಪರಿಯೂ ತನ್ನ ಗ್ರಾಹಕರ ಅನಾರೋಗ್ಯ ಮತ್ತು ಸಾವಿನ ಆಧಾರದ ಮೇಲೆ ಲಾಭ ಗಳಿಸಬೇಕೆಂದು ಆಶಿಸುವುದಿಲ್ಲ. ಹಾಗೆ ಆಶಿಸುವ ವ್ಯಾಪಾರಿಗಳ ಬಗ್ಗೆ ಈ ಚರ್ಚೆ ಅಲ್ಲ. ಆದರೆ ವ್ಯಾಪರವನ್ನು ನಡೆಸುವ, ಪರಿಸರ - ಜನಸಮುದಾಯವನ್ನು ಯಾವ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆನ್ನುವ ಮಿತಿಗಳು, ಭಿನ್ನ ವ್ಯಾಪಾರಗಳಿಗೆ- ವ್ಯಾಪಾರಿಗಳಿಗೆ, ಭಿನ್ನವಾಗಿರುತ್ತವೆ. ಪೆಪ್ಸಿ ಸಂಸ್ಥೆಯ ಮುಖ್ಯಸ್ತೆ ಇಂದಿರಾ ನೂಯಿಗೂ, ಆ ಬಗ್ಗೆ ಹುಯಿಲಬ್ಬಿಸಿದ ಪರಿಸರವಾದಿ ಸುನೀತಾ ನಾರಾಯಣ್ ಗೂ ಆಲೋಚನೆ ವಿಚಾರವಾದದ ಮಟ್ಟಿನಲ್ಲಿ ಮೂಲಭೂತ ಭಿನ್ನತೆ ಎಲ್ಲಿದೆ? ಎನ್ನುವ ಪ್ರಶ್ನೆ ಕುತೂಹಲದ್ದು. ಈ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಹೊರಟರೆ ಈ ವಿಚಾರಧಾರೆಯ ಭಿನ್ನತೆ ಸ್ವಲ್ಪ ಮಟ್ಟಿಗೆ ನಮಗೆ ಅರ್ಥವಾಗುತ್ತದೆ ಅನ್ನಿಸುತ್ತದೆ. ಆದರೆ ನಾನು ಹೇಳಹೊರಟಿರುವ ಭಿನ್ನತೆ ಜಟಿಲವಾದ ಸಮಸ್ಯೆಯ ಒಂದು ಆಯಾಮ ಮಾತ್ರವೆನ್ನುವುದನ್ನು ನಾವು ಮನಗಾಣಬೇಕು.

ಎಡಪಂಥೀಯರು ಸಮಾನತೆಯ ಮೂಲಸೂತ್ರವನ್ನು ಹಿಡಿದು ಹೊರಟವರು. ಮಾರುಕಟ್ಟೆಯನ್ನೇ ದೈವ ಮಾಡಿಕೊಂಡವರಿಗೆ ಈ ಸಮಾನತೆಯೇ ಅ-ಸಮಾನತೆಯ ಪ್ರತೀಕವಾಗಿ ಕಾಣುತ್ತದೆ. ಮಾರುಕಟ್ಟೆ ದೈವವಾದರೆ, ಹೆಚ್ಚಿನ ಕೆಲಸ ಮಾಡಿದವರಿಗೆ - ಹೆಚ್ಚಿನ ದಕ್ಷತೆ ತೋರಿದವರಿಗೆ ಹೆಚ್ಚಿನ ಫಾಯಿದೆಯಾಗಬೇಕು ಎನ್ನುವುದು ಸಹಜ ನಂಬಿಕೆ. ಸಮಾನತೆಯಿರುವುದು ದಕ್ಷತೆಯನ್ನ ಅಳೆಯುವ ಸೂತ್ರದಲ್ಲಿ ಅನ್ನುವ ವಾದವನ್ನು ಇವರು ಮಂಡಿಸುತ್ತಾರೆ. ಆದರೆ ಎಡಪಂಥೀಯರು ಈ ದಕ್ಷತೆ ಪ್ರಾಪ್ತವಾಗುವ ಪರಿಗಿರುವ ಚಾರಿತ್ರಿಕ ಕಾರಣಗಳ ಮೂಲಕ್ಕೆ ಹೋಗುತ್ತಾರೆ. ಹೀಗಾಗಿ ಅವರ ವಾದದ ಅನುಸಾರ ದಕ್ಷತೆಯನ್ನು ಆರ್ಜಿಸಲೇ ಒಂದೆರಡು ತಲೆಮಾರುಗಳು ಬೇಕಾಗಬಹದಾದ್ದರಿಂದ ಆ ನಡುವಿನ ಕಾಲದಲ್ಲಿ ಮಾಪನದ ದಂಡಗಳು ಭಿನ್ನವಾಗಿರಬೇಕು ಅನ್ನುವುದನ್ನು ನಾವು ಪರಿಗಣಿಸಬೇಕಾಗುತ್ತದೆ.

ಪರಿಸರವಾದಿಗಳು ಯೋಚಿಸುವಾಗ ಅವರ ದೃಕ್ಪಥ ಸಾಮಾನ್ಯವಾಗಿ ಮುಂದಿನ ತಲೆಮಾರುಗಳಿಗೆ ನಾವು ಎಂಥಹ ಪರಿಸರವನ್ನು ಬಳುವಳಿಯಾಗಿ ನೀಡುತ್ತಿದ್ದೇವೆ ಅನ್ನುವ ಭವಿಷ್ಯವಾದೀ ದೃಕ್ಪಥವನ್ನು ಪ್ರತಿಪಾದಿಸುತ್ತಾರೆ. ಹೀಗಾಗಿ ಇವರುಗಳ ಕಾಲಮಾಪನವೂ ತಲೆಮಾರುಗಳಲ್ಲಿಯೇ ಇರುತ್ತದೆ. ವ್ಯತ್ಯಾಸವೆಂದರೆ - ಎಡಪಂಥೀಯರು ಅ-ಸಮಾನತೆಯ ಮೂಲವನ್ನು ಭೂತದಲ್ಲಿ ಹುಡುಕಿ ಅದಕ್ಕೊಂದು ಕಾವ್ಯನ್ಯಾಯವನ್ನೊದಗಿಸುವ ಮಾತನ್ನಾಡಿದರೆ, ಪರಿಸರವಾದಿಗಳ ಕಾಲದಿಗಂತ ಭವಿಷ್ಯದಲ್ಲಿರುತ್ತದೆ.

ಆದರೆ ಮಾರುಕಟ್ಟೆಯನ್ನು ನಂಬಿದವರ ಆಲೋಚನಾಲಹರಿ ಈಗಿಲ್ಲಿ - ಹಿಯರ್ ಆಂಡ್ ನೌ - ಎನ್ನುವ, ಬಹತೇಕ ತಮ್ಮ ಜೀವನಕಾಲದಲ್ಲಿ ಲಾಭಾರ್ಜನೆಯನ್ನು ಹೆಚ್ಚಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಜೀವನಕಾಲವೂ ದೊಡ್ಡಕಾಲಮಾಪನವೇ. ಲಾಭಾರ್ಜನೆಯ ಮಾಪನವನ್ನು ಅನೇಕ ವರ್ಷಗಳ ಮಾತಿರಲಿ, ವಾರ್ಷಿಕ ಮತ್ತು ಮೂರು ತಿಂಗಳಲ್ಲಿ ಎಷ್ಟು ಲಾಭವನ್ನಾರ್ಜಿಸಿದ್ದೇವೆನ್ನುವ, ಅವಧಿಗೆ ಆ ಕಾಲಮಾಪನವನ್ನು ಮಾರುಕಟ್ಟೆಗಳು ಇಳಿಸಿಬಿಟ್ಟಿವೆ. ಪೈಪೋಟಿಯ ಕಬಳಿಕೆಯ ಈ ವಾತಾವರಣದಲ್ಲಿ ಬಂಡವಾಳಶಾಹಿಗಳಿಗೂ, ಎಡಪಂಥೀಯರಿಗೂ, ಪರಿಸರವಾದಿಗಳಿಗೂ ಇರುವ ಮೂಲಭೂತ ವ್ಯತ್ಯಾಸ ಕಾಲ ದಿಗಂತದ್ದು ಅನ್ನಿಸುತ್ತದೆ. ನಾವು ಬಂಡವಾಳಶಾಹಿ ಸಂಸ್ಥೆಗಳನ್ನೇ ನೋಡಿದಾಗ - ಒಟ್ಟಾರೆ ಜನಮನದಲ್ಲಿ ಗೌರವವನ್ನು ಪಡೆದಿರುವ ಎಡಿಸನ್ ನಿರ್ಮಿಸಿದ ಜೆನರಲ್ ಎಲೆಕ್ಟ್ರಿಕ್, ಭಾರತದ ಟಾಟಾ ಸಂಸ್ಥೆಗಳಿಗೂ - ಇಂದಿದ್ದು ನಾಳೆ ಮಾಯವಾಗುವ ಕಂಪನಿಗಳಿಗೂ ಇರುವ ಮೂಲಭೂತ ವ್ಯತ್ಯಾಸವೂ ದಿಗಂತದ ದೃಕ್ಪಥಕ್ಕೆ ಸಂಬಂಧಿಸಿದ್ದೇ ಇರಬಹುದು.

ಹೀಗಾಗಿಯೇ ಬಂಡವಾಳಶಾಹಿ ತತ್ವದ ನಿರಂತರತೆಯನ್ನು ಎಡಪಂಥೀಯರೂ, ಪರಿಸರವಾದಿಗಳೂ, ಇಷ್ಟವಿಲ್ಲದಿದ್ದರೂ, ಒಪ್ಪುತ್ತಲೇ ತಮ್ಮ ತಮ್ಮ ಹೋರಾಟವನ್ನು ವ್ಯಾಪಾರವಾದಿಗಳ ಕಾಲದಿಗಂತವನ್ನು ವಿಸ್ತರಿಸುವ ಕೆಲಸ ಮಾಡಬೇಕಾಗುತ್ತದೆ. ಆದರೆ 150 ವರ್ಷಗಳ ಚರಿತ್ರೆ - ಅನೇಕ ತಲೆಮಾರುಗಳನ್ನು ಕಂಡ - ಲೀಮನ್ ಬ್ರದರ್ಸ್ ನಂತಹ ಸಂಸ್ಥೆ ರಾತ್ರೋರಾತ್ರಿ ಮುಳುಗಿದ್ದರ ಹಿನ್ನೆಲೆಯೇನು? ಅಲ್ಲಿಯೂ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ತಾವು ನಡೆಸುತ್ತಿರುವ ವ್ಯಪಾರಕ್ಕೆ ಸಲ್ಲುತ್ತಿರುವ ಲಾಭ ಸಮಂಜಸವಾದದ್ದೇ ಅನ್ನುವುದನ್ನ ಆಗಾಗ ಅವಲೋಕಿಸಿಕೊಳ್ಳಬೇಕಾಗುತ್ತದೆ. ಉಜ್ವಲ ಚರಿತ್ರೆಯಿರುವುದು ಭವ್ಯ ಭವಿಷ್ಯಕ್ಕೆ ನೀಡುವ ಗ್ಯಾರೆಂಟಿಯಂತೂ ಅಲ್ಲವೇ ಅಲ್ಲ. ಕೆಲವೇ ಸಾರ್ಥಪರ ಲೋಲುಪಿ ಮ್ಯಾನೇಜರುಗಳ ಅತಿಯಾಸೆ 150 ವರ್ಷಗಳ ಚರಿತ್ರೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಣ್ಣು ಮುಕ್ಕಿಸಬಹುದೆಂದು ಅನೇಕ ಬಾರಿ ನಿರೂಪಿಸಿದ್ದಾರೆ. ಹೀಗಾಗಿ ನಾವು ಕೇಳುತ್ತಿರುವ ಈ ಪ್ರಶ್ನೆ ವಿಚಾರಧಾರೆಯ ಪ್ರಶ್ನೆಯಲ್ಲವೇ ಅಲ್ಲ - ಬದಲಿಗೆ ಆ ವಿಚಾರಧಾರೆಯನ್ನು ಯಾವ ಚೌಕಟ್ಟಿನೊಳಗೆ, ಯಾವ ಮಿತಿಗಳೊಳಗೆ ಅರ್ಥೈಸುತ್ತೇವೆ, ಆ ಮಿತಿಗಳನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ ಅನ್ನುವ ಯೋಚನೆ ಮುಖ್ಯವಾದದ್ದು ಅನ್ನಿಸುತ್ತದೆ. ಹೀಗಾಗಿಯೇ ನನ್ನಂತಹ ಕುತೂಹಲಿ ಮೇಷ್ಟರುಗಳು ಎರಡೂ ವಾದಗಳನ್ನು ನೋಡುತ್ತಾ ಎಡಕ್ಕೂ ವಾಲದೇ, ಬಲಕ್ಕೂ ಬೀಳದೇ ಮುಂದುವರೆಯುವ ಕುಶಲಕೆಲಸವನ್ನು ಮಾಡಿ ಜೀವನ ನಡೆಸಬೇಕಾಗಿದೆ.


No comments:

Post a Comment