Wednesday, March 6, 2013

ಕಂದೀಲಿನ ಮೇಲೆ ಧೂಳು!



ಗುಜರಾತ್ ಸರಕಾರ ವಿಕಾಸದ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ರಾಜ್ಯದ ಆಚೆ ಹೆಚ್ಚಾಗಿ ನಡೆಯುವುದಿಲ್ಲ. ಗುಜರಾತಿನ ಬಗ್ಗೆ ಹೊರಗೆ ಚರ್ಚೆ ನಡೆಯುವಾಗ ಎರಡು ಮುಖ್ಯ ವಿಚಾರಗಳು ಚರ್ಚಿತಗೊಳ್ಳುತ್ತವೆ. ಮೊದಲನೆಯ ಮತ್ತು ಅತಿ ಮುಖ್ಯ ವಿಷಯ ಗೋಧ್ರಾ ಮತ್ತು ತದನಂತರದ ಹತ್ಯಾಕಾಂಡ. ಆ ಬಗ್ಗೆ, ಅದರಲ್ಲಿ ಸರಕಾರದ ಪಾತ್ರದ ಬಗ್ಗೆ, ಪೋಲೀಸರ ಪಾತ್ರದ ಬಗ್ಗೆ ಎಷ್ಟೋ ಚರ್ಚೆ ನಡೆದಿದೆ. 
ಅದೇ ಸಮಯಕ್ಕೆ ಗುಜರಾತಿನಲ್ಲಿನ ವಿಕಾಸದ ಬಗೆಗಿನ ವಿಚಾರಗಳು ಹೊರಕ್ಕೆ ಬರುವುದೇ ಇಲ್ಲ. ಇಲ್ಲಿ ಜನ ಸುಖವಾಗಿದ್ದಾರೆಯೇ? ಒಂದು ಕೋಮಿನವರು ಭಯಭೀತಿಯಿಂದ ಜೀವಿಸುತ್ತಿದ್ದಾರೆಯೇ? ಇಲ್ಲಿ ರಾಕ್ಷಸತ್ವ ಕಾಣಿಸುತ್ತದೆಯೇ? ಈ ಎಲ್ಲಕ್ಕೂ ಸರಳವಾದ ಉತ್ತರಗಳನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಗುಜರಾತಿನ ವಿಷಯಕ್ಕೆ ಬಂದಾಗ ಚರ್ಚೆಗೊಳಗಾಗುವ ಮತ್ತೊಂದು ವಿಚಾರ ನರ್ಮದಾ, ಅಣೆಕಟ್ಟು, ನೀರು, ಮೇಧಾ ಮತ್ತು ಅದಕ್ಕೆ ಸಂಬಂಧಿಸಿದ ವಿವಾದದ್ದು.

ಈ ಎರಡೂ ವಿಚಾರಗಳು ಎಷ್ಟರ ಮಟ್ಟಿಗೆ ಈ ರಾಜ್ಯದಲ್ಲಿ ಮುಖ್ಯವಾಗಿದೆಯೆಂದರೆ, ಆ ವಿಚಾರಗಳನ್ನೆತ್ತಿದರೆ ಯಾವುದೋ ಗಾಯವನ್ನು ಬಗೆದಂತೆ ಬಹಳವೇ ಜೋರಾದ ಪ್ರತಿಕ್ರಿಯೆ ಬರುತ್ತದೆ. ಆಮೀರ್ ಖಾನ್ ಮೇಧಾರನ್ನು ಬೆಂಬಲಿಸಿದಾಗ ಅವರ ಚಿತ್ರ ಫನಾ ಇಲ್ಲಿ ಬಿಡುಗಡೆಯಾಗದಂತೆ ನೋಡಿಕೊಳ್ಳಲಾಯಿತು. ಇದನ್ನು ಯಾವುದೇ ಸರಕಾರೀ ಬ್ಯಾನ್ ಮೂಲಕ ಮಾಡಲಿಲ್ಲ. ಅದು ಸಫಲವಾದದ್ದು ಕೇವಲ ’ಭಯ’ದಿಂದಾಗಿ. ಹಾಗೆಯೇ ರಾಹುಲ್ ದೋಲಾಕಿಯಾ ನಿರ್ದೇಶನದ ಪರ್‌‍ಜೇನಿಯಾ ಅನ್ನುವ ಸಿನೇಮಾ ಕೂಡಾ ಬಿಡುಗಡೆಯಾಗಲಿಲ್ಲ. ಇದರ ಹಿಂದಿನ ಕೈ ಯಾವುದೆಂದು ಊಹಿಸುವುದು ಕಷ್ಟವಲ್ಲ. ಹಾಗೆಯೇ ನರ್ಮದಾದ ಬಗ್ಗೆ ಒಂದು ರೀತಿಯಾದಂತಹ ನಿಲುವು ತೆಗೆದುಕೊಂಡಿರುವ ಮೇಧಾ, ಆಗಾಗ ನನಗಿಂತಲೂ ಉದ್ದುದ್ದ ಲೇಖನ ಬರೆಯುವ ಅರುಂಧತಿ ರಾಯ್, ಬೆಸ್ಟ್ ಬೇಕರಿ ಇತ್ಯಾದಿಗಳ ಬಗ್ಗೆ ಕೋರ್ಟಿಗೆ ಹೋಗಿರುವ ತೀಸ್ಟಾ.. 
ಇವರೆಲ್ಲರೂ ಗುಜರಾತಿನಲ್ಲಿ ಸುರಕ್ಷಿತವಾಗಿದ್ದಾರೆನ್ನುವುದಕ್ಕೆ ಗ್ಯಾರೆಂಟಿ ಇಲ್ಲ. ಗೋಧ್ರಾದ ಸಮಯದಲ್ಲಿ ಸರಕಾರದ ವಿರುದ್ಧ ನಿಲುವು ತೆಗೆದುಕೊಂಡ ಮಲ್ಲಿಕಾ ಸಾರಾಭಾಯಿ, ಅಥವಾ ಭಿನ್ನ ಸಮುದಾಯಗಳೊಂದಿಗೆ ಕೆಲಸ ಮಾಡುವ ’ಸೇವಾ’ದ ಇಳಾಭಟ್ ಗುಜರಾತಿನಲ್ಲಿದ್ದರೂ ಶಾಂತಿಯಿಂದಿದ್ದಾರೆನ್ನುವುದಕ್ಕೆ ಸಾಧ್ಯವಿಲ್ಲ. [ನಾನು ಪ್ರಸ್ತಾಪಿಸಿರುವ ಎಲ್ಲರೂ ಹೆಂಗಸರೇ ಆಗಿರುವುದು ಕೇವಲ ಕಾಕತಾಳೀಯವಿರಬಹುದು] ಆದರೆ ಈ ಬಗ್ಗೆ ಚರ್ಚಿಸುವುದೂ, ಈ ಬಗ್ಗೆ ಮಾತನಾಡುವುದೂ ಸರಕಾರದ ಪರವಿರುವವರಿಗೆ ಮುಜುಗರದ ವಿಷಯ. ಕಣ್ಣು ಮುಚ್ಚಿದರೆ ಭಯಾನಕ ನಿಜ ಮಾಯವಾಗಿ, ಭವ್ಯ ಕನಸು ಬೀಳಬಹುದೆಂಬ ಭ್ರಮೆಯಲ್ಲಿ ಜೀವಿಸುತ್ತಿರುವ ಒಂದು ನರಜಾತಿ ಹೀಗಿದೆ.

ಅದೇ ಸಮಯಕ್ಕೆ, ಆ ವಿರುದ್ಧ ನಿಂತಿರುವ ಜನರಿಗೆ ’ವಿಕಾಸ’ ಕಾಣಿಸುವುದಿಲ್ಲ. ಆ ಬಗ್ಗೆ ಚರ್ಚೆ ಗೋಧ್ರಾದ ಬಗ್ಗೆ ಕ್ಷಮೆ ಯಾಚಿಸುವವರೆಗೆ ಸಾಧ್ಯವಿಲ್ಲ. ಹೀಗಾಗಿ ಅನೇಕ ಪದರಗಳಿರುವ, ರಂಗುರಂಗಿನ ಈ ರಾಜ್ಯಕ್ಕೆ ಹೊರಲೋಕದಲ್ಲಿ ಎರಡೇ ಬಣ್ಣಗಳು: ಕಡುಕಪ್ಪು, ಬೆಳ್ಳಂಬೆಳಗು ಬಿಳಿ.. ಎರಡೂ ಸತ್ಯವಲ್ಲ...

ಈಚೆಗೆ ನಾನು ಸುರೇಂದ್ರನಗರ ಜಿಲ್ಲೆಯ ಎರಡು ಗ್ರಾಮಗಳಿಗೆ ಭೇಟಿನೀಡಿದೆ. ಅಹಮದಾಬಾದ್-ರಾಜ್‌ಕೋಟ್ ಹೈವೇಯಿಂದ ಹೆಚ್ಚು ದೂರವೇನೂ ಇಲ್ಲದ ಗ್ರಾಮಗಳು. ಆದರೆ ಎರಡೂ ಭಿನ್ನ ಗ್ರಾಮಗಳು. ನಾವು ಹೋದದ್ದು ಶಿವರಾತ್ರಿಯಂದು. ರಾತ್ರೆಯ 
ಜಾಗರಣೆಗೆ ನಿಮಿತ್ತ ಆಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಧ ಕಟ್ಟಿದ ದೇವಸ್ಥಾನದ ಬದಿಯ ಕಟ್ಟಡದಲ್ಲಿ ತಯಾರಿ ನಡೆದಿತ್ತು. ಮೇಲೆ ಫ್ಯಾನು ತಿರುಗುತ್ತಿತ್ತು. ಕೋಣೆಯಲ್ಲಿ ನೋಡಿದರೆ ಕೆಲಸ ಮಾಡದ ಎರಡು ಟಿ.ವಿ. ಸೆಟ್ಟುಗಳು ಬಿದ್ದಿದ್ದವು. ಡಿವಿಡಿ ಸೆಟ್ಟುಗಳ ಪೆಟ್ಟಿಗೆಗಳು ಅಟ್ಟದಮೇಲಿದ್ದವು. ಆ ಊರಿಗೆ ನರ್ಮದಾ ನದಿಯ ನೀರು ಬಂದಿಲ್ಲ. ಅಲ್ಲಿನ ಜನ ಮಳೆಯನ್ನ ನಂಬಿ ಕೃಷಿ ಮಾಡುತ್ತಿದ್ದಾರೆ, ಅಥವಾ ವಲಸೆ ಹೋಗಿ ಹಣ ಸಂಪಾದಿಸುತ್ತಾರೆ. ಬಾವಿ ತೋಡಿದರೆ ನೀರು ಸಿಕ್ಕಬಹುದಾದರೂ ಅದು ಉಪ್ಪು ಮಿಶ್ರಿತವಾದ್ದರಿಂದ ಕೃಷಿಗೆ ಉಪಯೋಗಿಸುವಂತಿಲ್ಲ. ಎಲ್ಲ ಎಂದಿನ ತೊಂದರೆಗಳನ್ನು ಹೇಳಿಕೊಂಡರು. ನಂತರ ನಾವು ಒಂದು ಪ್ರಶ್ನೆಯನ್ನು ಕೇಳಿದೆವು. ವಿದ್ಯುತ್ ಸರಬರಾಜು ಹೇಗಿದೆ? ಅದಕ್ಕೆ ಬಂದ ಉತ್ತರ ಬೆಂಗಳೂರಿನವನಾದ ನನಗೆ ಅವಾಕ್ಕುಂಟು ಮಾಡುವಂಥದ್ದು. ಇಲ್ಲಿ ವಿದ್ಯುತ್ತಿಗೆ ಯಾವ ಕುತ್ತೂ ಇಲ್ಲ. ಮನೆಗೆ ೨೪ ಘಂಟೆ, ಕೃಷಿಗೆ ೮ ಘಂಟೆ ಸರಬರಾಜಾಗುತ್ತದೆ. ಎಂದೂ ಕರೆಂಟು ಹೋಗುವುದಿಲ್ಲ. ಈ ಚಮತ್ಕಾರ ನಡೆದಿರುವುದು ಕಳೆದ ಒಂದೂವರೆ ವರ್ಷದಲ್ಲಿ, ಜ್ಯೋತಿಗ್ರಾಮ ಯೋಜನೆ ಬಂದಾಗಿನಿಂದ. ಈ ವಿಷಯದಲ್ಲಿ ತಕರಾರು ಎತ್ತಿದವರು ಯಾರೂ ಇಲ್ಲ.

ಹೌದೇ? ಅದರಿಂದ ಉಪಯೋಗವೇ? ತಿಳಿಯದು. ಮಕ್ಕಳಿಗೆ ಓದಿಗೆ ಅನುಕೂಲವಾಗಿದೆ, ಆದರೆ ಅದೇ ಸಮಯಕ್ಕೆ ಟೀವಿ ನೋಡುವುದೂ ಹೆಚ್ಚಾಗಿದೆ. ಊರಲ್ಲಿ ಫ್ರಿಜ್ಜುಗಳು ಹೆಚ್ಚಾಗಿವೆ. ಟಿವಿಕೊಳ್ಳಲು ಲಿಮ್ಡಿಯಲ್ಲಿ ಸುಲಭ ಕಂತಿನ ಸೌಲಭ್ಯವಿದೆ. ಮನೆಯಲ್ಲಿ ಹೆಚ್ಚಿನ ಬೆಳಕಿದೆ. ಎಲ್ಲಕ್ಕಿಂತ ಮುಖ್ಯವೆಂದರೆ ಎಲ್ಲರ ಮನೆಯಲ್ಲೂ ವಿದ್ಯುತ್ ಖರ್ಚು ಹೆಚ್ಚಾಗಿದೆ. ಮೊದಲಾದರೆ 
ವಿದ್ಯುತ್ ಇಲ್ಲವೆಂದು ತಾವೇ ಗಾಳಿ ಬೀಸಿಕೊಳ್ಳುತ್ತಿದ್ದರು, ಈಗ ಹೆಚ್ಚೂಕಮ್ಮಿ ಎಲ್ಲರ ಮನೆಯಲ್ಲೂ ಫ್ಯಾನಿದೆ.

ಸ್ವಲ್ಪ ದೂರದಲ್ಲಿ ಇದ್ದ ವಡೊದ್‌ಗೂ ಹೋದೆವು. ಅಲ್ಲಿ ನರ್ಮದಾ ನೀರಿದೆ. ಹೀಗಾಗಿ ಕೃಷಿಗೆ ೮ ಘಂಟೆ ಅವಿರತ ವಿದ್ಯತ್ತು ಸರಬರಾಜಿನಿಂದ ಬಹಳವೇ ಉಪಯೋಗವಾಗಿದೆ ಎಂದು ಕೆಲವರು ಹೇಳಿದರು. ಒಬ್ಬ ಮುದುಕಪ್ಪ ನಮ್ಮನ್ನು ವಿದ್ಯುತ್ 
ವಿಭಾಗದವರು ಎಂದು ಭಾವಿಸಿ ಕೃಷಿಗೆ ೮ ಘಂಟೆಗಳಿಗಿಂತ ಹೆಚ್ಚಿನ ನೀರು ಕೊಟ್ಟೀರಿ ಹುಷಾರ್! ಎಂದು ತಾಕೀತು ಮಾಡಿದ. ಯಾಕೆ? ನೆಲದಿಂದ ನೀರು ಹೀರಿ ಹಾಳುಮಾಡಿಬಿಡುತ್ತಾರೆ. ಎಂಟು ಘಂಟೆ ಸಾಕು. ಎಂದ. ವಡೋದ್‌ ಗ್ರಾಮದ ಪೋಸ್ಟ್ ಮಾಸ್ಟರ್ ಮನೆಗೆ ಹೋದೆವು. ಆತನ ಕೆಲಸ ಹೆಚ್ಚಾಗಿದೆಯಂತೆ. ವಿದ್ಯುತ್ತು ಬಿಲ್ಲಿನ ಹಣವನ್ನು ಪೋಸ್ಟಾಫೀಸಿನಲ್ಲಿ ಪಾವತಿ ಮಾಡುತ್ತಾರಲ್ಲ ಅದರಿಂದಾಗಿ. ಅಂದು ಶಿವರಾತ್ರಿಯಾದ್ದರಿಂದ ರಜಾ. ಮಧ್ಯಾಹ್ನದ ನಿದ್ದೆ ತೆಗೆಯುತ್ತಿದ್ದವನನ್ನು ಫ್ಯಾನಿನಡಿಯಿಂದ ಎಬ್ಬಿಸಿದ್ದೆವು. ೨೪ ಘಂಟೆಯ ಸರಬರಾಜಿನಿಂದ ಹಳ್ಳಿಗೆ ಉಪಯೋಗವಾಗಿದ್ದರೂ, ಕೃಷಿಯಲ್ಲಿಲ್ಲದ ತನಗೆ ಖರ್ಚೇ ಹೆಚ್ಚಾಗಿದೆಯಂತೆ. ಈಚೆಗೆ ಕಪ್ಪು ಬಿಳುಪು ಟೀವಿಯಿಂದ ಬಣ್ಣದ ಟೀವಿಗೆ ಮಾರ್ಪಾಡಾಗಬೇಕೆಂಬ ಹೆಂಡತಿಯ ಪಿರಿಪಿರಿಯೂ ಹೆಚ್ಚಿದೆಯಂತೆ. ಅದಕ್ಕೆ ಕಂತಿನ ಮೇಲೆ ಟಿವಿ ತರುವ ಯೋಚನೆಯಿದೆ. ಕಾಲ ಕೂಡಿದರೆ ಫ್ರಿಜ್ಜೂ ಕೊಳ್ಳಬೇಕು. ಆದರೆ ಇದರಿಂದ ಅನೇಕ ಉಪಯೋಗಗಳೂ ಇವೆ. ವಿದ್ಯುತ್ತು ಇರುವುದರಿಂದ ನೀರಿನ ಸರಬರಾಜೂ ೨೪ ತಾಸು ಆಗುತ್ತದೆ. ಇಲ್ಲವಾದಲ್ಲಿ ಹಳ್ಳಿಯ ಓವರ್‌ಹೆಡ್ ಟ್ಯಾಂಕು ತುಂಬಿದಾಗ ಮಾತ್ರ ಸರಬರಾಜಾಗುತ್ತಿತ್ತು..

ಇದ್ದಕ್ಕಿದ್ದ ಹಾಗೆ ಜ್ಯೋತಿಗ್ರಾಮ ಯೋಜನೆ ಹಾಕಿ ಪ್ರತಿ ಹಳ್ಳಿಗೂ ೨೪ ತಾಸು ವಿದ್ಯುತ್ತು ನೀಡಿದಾಗ ಎಷ್ಟೊಂದು ಆಸೆ, ಆಕಾಂಕ್ಷೆ, ಆತಂಕಗಳು! ಸೆಕೆಯಾದಾಗ ಫ್ಯಾನ್ ಚಲಾಯಿಸಬಹುದೆಂಬ ಖಾತರಿ ಜೀವನವನ್ನು ಹೇಗೆ ಬದಲಾಯಿಸುತ್ತದೆ. ಆದಾಯ ಹೆಚ್ಚಾಗುವ ಮಾರ್ಗ ಕೆಲವರಿಗಾದರೆ, ಖರ್ಚು ಹೆಚ್ಚಾಗುವ ಖಾತರಿ ಕೆಲವರಿಗೆ ಮಾತ್ರ ಸೀಮಿತವಲ್ಲ. ಆದರೆ ಯಾರೂ ಈ ಬಗ್ಗೆ ದುಃಖಿಗಳಾಗಿರುವಂತೆ ಕಾಣುವುದಿಲ್ಲ. ಅದೇ ವೇಳೆಗೆ ವಿದ್ಯುತ್ತಿನ ಕಳುವೂ ಕಡಿಮೆಯಾಗಿದೆ. ಇದಕ್ಕೆ ಕಾರಣ ವಿದ್ಯುತ್ ಕಳ್ಳರ ವಿರುದ್ಧ ಸರಕಾರ ತೆಗೆದುಕೊಳ್ಳುತ್ತಿರುವ ಕಡಕ್ ಕ್ರಮ!!

ವಿದ್ಯುತ್ ಮುಫತ್ತಾಗಿ ನೀಡದೇ, ಕಳ್ಳರನ್ನು ಒಳಕ್ಕೆ ಹಾಕಿ ಬದಿಬದಿಯಲ್ಲಿ ವಿದ್ಯುತ್ತನ್ನೂ ನಿಯಮಿತವಾಗಿ ಸರಬರಾಜು ಮಾಡಿ ಗುಜರಾತ್ ಸರಕಾರ ಚುನಾವಣೆಯಲ್ಲಿ ಮತ್ತೆ ಗೆದ್ದಿದೆ. ಜನ ಇದರಿಂದ ಸಂತುಷ್ಟರಾಗಿದ್ದಾರೆ. ಜೀವನ ಸ್ಥರ ಉತ್ತಮಗೊಂಡಿದೆ.. ಆದರೆ ಖರ್ಚೂ ಹೆಚ್ಚು, ಬಹುಶಃ ಕಲರ್ ಟೀವಿ, ಕೇಬಲ್, ಡಿಷ್ ಇತ್ಯಾದಿಯಾಗಿ ಸಾಲವೂ ಹೆಚ್ಚಾಗಿರಬಹುದು. ಹಾಗಾದರೆ ವಿಕಾಸ ಎಂದರೆ ಏನು? ಸೆಕೆಯಾದಾಗ ಫ್ಯಾನ್ ಹಾಕಿಕೊಳ್ಳುವುದೇ ಅಥವಾ ಸಾಲದಲ್ಲಿ ಮುಳುಗಿ ಗುಜರಾತಿ "ಈ ಟೀವಿ" ನೋಡುವುದೇ?

ಅಂದಹಾಗೆ ನಾವು ಹೋದ ಮನೆಯಲ್ಲಿ ಕಂದೀಲುಗಳನ್ನು ಪರೀಕ್ಷಿಸಿದೆವು. ಎಲ್ಲ ಕಂದೀಲುಗಳ ಮೇಲೂ ತಿಂಗಳುಗಟ್ಟಲೆಯ ಧೂಳು. ಕಂದೀಲು ಲಾಲೂ ಪ್ರಸಾದರ ರಾಷ್ಟೀಯ ಜನತಾ ದಳದ ಚುನಾವಣಾ ಚಿನ್ಹೆ. ಲಾಲೂ ಈ ರೀತಿಯಾದಂತಹ ಯೋಜನೆಯನ್ನು ಬಿಹಾರದಲ್ಲಿ ಹಮ್ಮಿಕೊಂಡು ಅದು ಯಶಸ್ವಿಯಾದರೆ ಆತನ ಪಕ್ಷದ ಚುನಾವಣಾ ಚಿನ್ಹೆಯ ಗತಿಯೇನು? "ಜಿಸ್‌ಕಾ ಹಾಥ್ ಮೆ ಹೈ ಲಾಲ್ಟೀನ್ ಓ ಜಾಯೇಗಾ ಪಾರ್ಲಾಮೆಂಟ್" ಎಂಬ ಘೋಷಣೆ ಧೂಳು ತಿನ್ನಬಹುದೇ?

ಬಾಲಂಗೋಚಿ: ಕಳೆದ ತ್ರೈಮಾಸಗಳಲ್ಲಿ ಗುಜರಾತಿನ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟ ಮಾಡಿವೆ. ಚುನಾವಣೆಯ ಸಮಯದಲ್ಲಿ ಕೃಷಿಗೆ ೮ ಘಂಟೆಗೆ ಬದಲು ೧೨ ಘಂಟೆ ವಿದ್ಯುತ್ತು ಸರಬರಾಜು ಮಾಡಲಾಯಿತಂತೆ. ಹೀಗಾಗಿ ೪ ಘಂಟೆ ವಿದ್ಯುತ್ತು ದರ ಕಡಿಮೆಯಾದ ಕೃಷಿಗೆ ಹೋದದ್ದಲ್ಲದೇ, ವಿದ್ಯುತ್ ಕಳ್ಳತನ ಆಗುತ್ತಿದ್ದ ಸ್ಥಳಗಳಲ್ಲಿ, ಚೋರಿ ಮಾಡಲು ೪ ಘಂಟೆಯ ಅಧಿಕ ಅವಕಾಶವೂ ಸಿಕ್ಕಿತಂತೆ. ಹಾಗೂ ಚುನಾವಣಾ ಘೋಷಣೆಯಾದ ಮೇಲೆ ಮಾದರಿ ಆಚಾರ ಸಂಹಿತೆ ಲಾಗೂ ಆಗುತ್ತದಾದ್ದರಿಂದ ಸರಕಾರವೂ ಕಳ್ಳರ ಮೇಲೆ ಕ್ರಮ ಕೈಗೊಳ್ಳುವಂತಿಲ್ಲವೇನೋ!! ಪರವಾಗಿಲ್ಲ ಬಿಡಿ. ಮೂರು ತಿಂಗಳ ನಷ್ಟವನ್ನು ಪರಿಹಾರ ಮಾಡಿಕೊಳ್ಳಲು ಐದು ವರ್ಷಗಳ ಸಮಯವಿದೆಯಲ್ಲಾ. ಜ್ಯೋತಿಗ್ರಾಮದ ವಿಶ್ಲೇಷಣೆ ಇನ್ನೂ ನಡೆಯಬೇಕಿದೆ. ಇದು ಕೇವಲ ಒಂದು ಝಲಕ್ ಮಾತ್ರ. ಇದರಲ್ಲೂ ಹುಳುಕುಗಳು ಕಾಣಬಹುದು.


No comments:

Post a Comment