Wednesday, March 27, 2013

ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ


ಕಳೆದ ವರ್ಷ ನಾವುಗಳು ಕ್ಯಾತದೇವರಗುಡಿಯ ಅರಣ್ಯದ ಪ್ರಾಂತಕ್ಕೆ ಪ್ರವಾಸ ಹೋದಾಗ ಜಂಗಲ್ ಲಾಡ್ಜಸ್‍ನ ಗೈಡ್ ಕಂ ಡ್ರೈವರ್ ಹರ್ ಬಹದ್ದೂರ್ ಥಾಪಾ ಜೊತೆ ಮಾತು ಬೆಳೆಸಿದ್ದೆ. ಥಾಪಾ ಹಿಮಾಚಲ ಪ್ರದೇಶದವನು, ಭಾರತೀಯ ಸೇನೆಯಲ್ಲಿದ್ದು ಯಾವುದೋ ಲಕ್-ಬೈ-ಚಾನ್ಸ್ ಆಗಿ ಇಲ್ಲಿ ಕೆಲಸ ಸಿಕ್ಕಿತ್ತಂತೆ. ದೂರದ ಹಿಮಾಚಲಕ್ಕೆ ಅವನು ಹಣ ಪಾವತಿಸುವುದು ಹೇಗೆ ಅನ್ನುವ ಕುತೂಹಲ ನನ್ನಲ್ಲಿತ್ತು. ವಲೆಸೆ ಹೋಗುವ ಕೆಲಸಗಾರರಿಗೆ ಇದು ದೊಡ್ಡ ಸವಾಲೆನ್ನುವುದನ್ನು ನಾವುಗಳು ಅನೇಕ ಅಧ್ಯಯನಗಳಲ್ಲಿ ಕಂಡುಕೊಂಡಿದ್ದೆವು. ಸಾಮಾನ್ಯವಾಗಿ ವಲೆಸೆ ಹೋಗುವ ಕೆಲಸಗಾರರು ತಮ್ಮ ಮುಕದ್ದಂ [ಮೇಸ್ತ್ರಿಗಳ] ಮೂಲಕವೇ ಎಲ್ಲ ವ್ಯವಹಾರವನ್ನೂ ಮಾಡುತ್ತಾರೆ. ಆದರೆ ಮುಕದ್ದಂ ಇಲ್ಲದ ಕೆಲಸದಲ್ಲಿರುವ ಈತ ಕರ್ನಾಟಕದಲ್ಲಿ ಸಂಪಾದಿಸುವ ಹಣವನ್ನು ಹಿಮಾಚಲಕ್ಕೆ ತಲುಪಿಸುವುದೂ ಅಥವಾ ಸೂರತ್‍ನ ವಜ್ರದ ಯೂನಿಟ್ಟುಗಳಲ್ಲಿ ಕೆಲಸ ಮಾಡುವ ಒಡಿಯಾ ಕೆಲಸಗಾರರು ಒರಿಸ್ಸಾಗೆ ಹಣ ತಲುಪಿಸುವುದೂ ಒಂದು ಸವಾಲೇ ಆಗಿತ್ತು. ಕಾರಣಗಳು ಅನೇಕ.

- ಮನಿ ಆರ್ಡರ್ ಮಾಡುವುದು ದುಬಾರಿ, ಸಾಲದ್ದಕ್ಕೆ ಪೋಸ್ಟ್ ಮನ್ ತನ್ನ ಪುಟ್ಟ ಪಾಲನ್ನು ಹಣ ತಲುಪಿಸಿದ್ದಕ್ಕೆ ಪಡೆಯುವ ಪರಿಪಾಠವೂ ಕಾಣಸಿಗುವುದು ಸಾಮಾನ್ಯ.

- ಬ್ಯಾಂಕಿನ ಡಿಡಿ ತೆಗೆದು ಕಳಿಸುವುದೂ ಪಿರಿಪಿರಿಯ ಕೆಲಸ ಅದಕ್ಕಾಗಿ ಪಾವತಿ ಮಾಡುವ ಕೇಂದ್ರದಲ್ಲಿ ಬ್ಯಾಂಕಿಗೆ ಒಂದಕ್ಕಿಂತ ಹೆಚ್ಚು ಬಾರಿ ಹೋಗಬೇಕಾದ್ದಲ್ಲದೇ [ಚೆಲಾನ್ ಕಟ್ಟಲು, ಹಾಗೂ ಡಿಡಿ ಪಡೆಯಲು] - ಹಣ ಪಡೆಯುವ ಜಾಗದಲ್ಲಿ ಡಿಡಿಯನ್ನು ಎಕೌಂಟಿಗೆ ಜಮಾ ಮಾಡಿ ಹಣ ಪಡೆಯಲು ಒಂದು ದಿನ ಕಾಯಬೇಕು.

- ಇವೆರಡೂ ಬಿಟ್ಟರೆ ವಲಸೆ ಕಾರ್ಮಿಕರು ಉಪಯೋಗಿಸಿಕೊಳ್ಳುತ್ತಿದ್ದ ಮೂರನೆಯ ದಾರಿಯೆಂದರೆ - ತಮ್ಮ ಊರಿನವರು ಯಾರಾದರೂ ಅತ್ತ ಹೋಗುತ್ತಿದ್ದರೆ ಅವರ ಕೈಯಲ್ಲಿ ಹಣ ಕಳುಹಿಸುವುದು. ಇದರಲ್ಲೂ ಸಮಯ ಹಿಡಿಯುವುದಲ್ಲದೇ ಒಂದು ವಿಚಿತ್ರ ಅಪಾಯವಿದೆಯೆಂದು ವಲಸೆ ಕಾರ್ಮಿಕರು ಅನೇಕ ಬಾರಿ ಮಾತನಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ [ಹೆಚ್ಚಿನಂಶ ರಿಜರ್ವೇಶನ್ ಇಲ್ಲದ ಬೋಗಿಯಲ್ಲಿ ಇವರುಗಳು ಹೋಗುವುದರಿಂದ] ಹಣ ಕಳ್ಳತನವಾಗುವ ಸಾಧ್ಯತೆಗಳಿದ್ದುವು. ಇನ್ನೂ ಕುತೂಹಲದ ಭೀತಿಯೆಂದರೆ ರೈಲ್ವೇ ಪೋಲೀಸರದ್ದು. ಹೆಚ್ಚಿನ ಹಣ ಹೊತ್ತೊಯ್ಯುವ ಬಡವರನ್ನು ಆರ್.ಪಿ.ಎಫ್.ನವರು ಅನುಮಾನದಿಂದ ನೋಡುತ್ತಾರಂತೆ. ಹೀಗಾಗಿ ಪೋಲೀಸರ ಪಿರಿಪಿರಿಯೂ, ಹಾಗೂ ಒಮ್ಮೊಮ್ಮೆ ಅವರಿಗೇ ಹಣವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ.

ಹೀಗೆ ವಲಸೆ ಬಂದು ನಾಲ್ಕು ಕಾಸು ಸಂಪಾದಿಸಿ ಹೋಗುವವರಿಗೆ ಉಳಿತಾಯವೇ ಇಲ್ಲದಂತೆ ಆಗುವ ಅಪಾಯವಿದೆ. ಎಲ್ಲರೀತಿಯಿಂದಲೂ ಇದು ಸವಾಲೇ. ಹೀಗಾಗಿ ವಲಸೆ ಬಂದ ಥಾಪಾ, ಈಚೆಗೆ ನಾನು ಕಟ್ಟಿಸಿದ ಮನೆಯಲ್ಲಿ ಮರದಕೆಲಸಕ್ಕೆ ಪಾಲಿಶ್ ಕೆಲಸ ಮಾಡಿದ ಗೊರಖ್‍ಪುರದ ರಾಧೇಶ್ಯಾಂ ಮತ್ತವನ ತಂಡದವರ ಸವಾಲೂ ಇದೇ ಇರಬಹುದು ಎಂದು ನಾನು ಕುತೂಹಲದಿಂದ ಅವರನ್ನು ಮನೆಗೆ ಹಣ ಕಳಿಸುವ ವಿಧಾನದ ಬಗ್ಗೆ ಕೇಳಿದೆ. ಕಳೆದ ವರ್ಷ ಥಾಪಾಜಿ, ಈಚೆಗೆ ರಾಧೇಶ್ಯಾಂ ಇಬ್ಬರೂ ಒಂದೇ ಉತ್ತರವನ್ನು ನೀಡಿದರು: ಬ್ಯಾಂಕುಗಳಲ್ಲಿ ಸಿ.ಬಿ.ಎಸ್. [ಇದರ ವಿವರ ಮುಂದೆ ನೋಡಿ!] ಆಗಿರುವುದರಿಂದ ನಮಗೆ ಅನುಕೂಲವಾಗಿದೆ. ತೊಂದರೆಯೇನೂ ಇಲ್ಲ. ಖರ್ಚಿಲ್ಲದೇ ನಾವುಗಳು ಹಣವನ್ನು ಮನೆಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದರು.

ಹಲವು ದಶಕಗಳಿಂದ ಬ್ಯಾಂಕುಗಳ ಗಣಕೀಕರಣ ನಡೆಯುತ್ತಿದೆ. ಮೊದಮೊದಲಿಗೆ ಬ್ಯಾಂಕಿನ ಕಾರ್ಮಿಕ ಸಂಘಗಳು ಈ ಗಣಕೀಕರಣವನ್ನು ವಿರೋಧಿಸಿದ್ದು ಉಂಟು. ಕೆಳವರ್ಗದ ಕಾರ್ಮಿಕರ ಕೆಲಸಗಳು ಗಣಕೀಕರಣದಿಂದ ಹರಣವಾಗುತ್ತದೆ ಅನ್ನುವುದು ಅವರ ವಾದವಾಗಿತ್ತು. ಹೀಗಾಗಿ ನಮ್ಮ ಬ್ಯಾಂಕುಗಳಲ್ಲಿ ಗಣಕೀಕರಣ ನಿಧಾನಗತಿಯಲ್ಲಿಯೇ ನಡೆಯಿತು.

ಇದರ ಫಾಯಿದೆಯೂ ನಮಗಾಯಿತೆನ್ನಿ. ೨೦೦೦ ಇಸವಿಯಲ್ಲಿ ಉದ್ಭವವಾಗುತ್ತದೆಂದು ಗುಲ್ಲೆಬ್ಬಿಸಿದ್ದ ವೈ-ಟೂ-ಕೆ ಸಮಸ್ಯೆ ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ತಟ್ಟಲಿತ್ತು. ಆದರೆ ಆಗ್ಗೆ ಹೆಚ್ಚು ಬ್ಯಾಂಕುಗಳು ಗಣಕೀಕೃತವಾಗಿರಲಿಲ್ಲವಾದ್ದರಿಂದ ಅದು ನಮ್ಮನ್ನು ಹೆಚ್ಚಾಗಿ ತಟ್ಟಲಿಲ್ಲ ಹಾಗೂ ಅದರ ಖರ್ಚನ್ನು ಬ್ಯಾಂಕುಗಳು ಉಳಿಸಿಬಿಟ್ಟವು. ಆಗ್ಗೆ ಇಂಟರ್ನೆಟ್‌ನಲ್ಲಿ ಹರಿಯುತ್ತಿದ್ದ ಒಂದು ನಗೆ ಚಟಾಕಿ ಇಂತಿತ್ತು: "ಭಾರತೀಯ ಬ್ಯಾಂಕುಗಳಲ್ಲಿ ೭೦% ವೈ-ಟೂ-ಕೆ ರೆಡಿ - ಅಂದರೆ ೨೦೦೦ ಇಸವಿಯ ಸಮಸ್ಯೆಯನ್ನು ಪರಿಹರಿಸಿವೆ" ಎಂದು ರಿಜರ್ವ್ ಬ್ಯಾಂಕು ಇತ್ತ ಒಂದು ಅಂಕಿಗೆ ಯಾರೋ ಜೋಡಿಸಿದ್ದ ಬಾಲಂಗೋಚಿ ಅಂದರೆ "ಮಿಕ್ಕ ೩೦% ಬ್ಯಾಂಕುಗಳು ಗಣಕೀಕೃತವಾಗಿವೆ!!" ಅರ್ಥಾತ್ ಗಣಕೀಕರಣವೇ ಇಲ್ಲದ ಬ್ಯಾಂಕುಗಳಲ್ಲಿ ಈ ಸಮಸ್ಯೆ ಸಮಸ್ಯೆಯೇ ಅಲ್ಲವಾಗಿತ್ತು!

ಹೀಗಿದ್ದ, ಬಡವರ ವಿರೋಧಿ ಎಂದು ಕರೆಯಲ್ಪಡುತ್ತಿದ್ದ, ಗಣಕೀಕರಣವನ್ನೂ ಆ ಹೆಸರಿನಿಂದ ಕರೆಯದೇ ಹಿಂಬಾಗಿಲಿನಿಂದ ಆಟೋಮ್ಯಾಟಿಕ್ ಲೆಡ್ಜರ್ ಪೋಸ್ಟಿಂಗ್ ಮಶೀನ್ ಎಂದು ಕಂಪ್ಯೂಟರುಗಳಿಗೆ ಹೊಸ ಹೆಸರು ನೀಡಿ ಗುಪ್ತವಾಗಿ ತರಬೇಕಿದ್ದ ಕಾಲದಿಂದ, ಇಂದಿಗೆ ಬ್ಯಾಂಕುಗಳು ಅದ್ಭುತ ಪ್ರಗತಿಯನ್ನು ಸಾಧಿಸಿಬಿಟ್ಟಿವೆ. ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕಿನಂತಹ ಬ್ಯಾಂಕುಗಳು ತಮ್ಮ ಎಲ್ಲ ಶಾಖೆಗಳೂ ಸಿ.ಬಿ.ಎಸ್. [ಕೋರ್ ಬ್ಯಾಂಕಿಂಗ್ ಸಲ್ಯೂಷನ್] ಅಳವಡಿಸಿವೆ ಅನ್ನುವುದನ್ನು ಘೋಷಿಸಿವೆ. ಈ ಸುದ್ದಿಯ ಮಹತ್ವ ಕಡಿಮೆಯದ್ದೇನೂ ಅಲ್ಲ. ಅದರಲ್ಲೂ ಸರಕಾರೀ ಬ್ಯಾಂಕುಗಳ ಶಾಖೆಗಳು ನಗರ ಪ್ರದೇಶದಲ್ಲಲ್ಲದೇ ಹಳ್ಳಿಗಾಡಿನಲ್ಲೂ ಇರುವುದರಿಂದ [ಒಟ್ಟಾರೆ ೭೦,೦೦೦ ಶಾಖೆಗಳಿರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಮಾರು ೪೫,೦೦೦ ಶಾಖೆಗಳು ನಗರೇತರ ಪ್ರದೇಶದಲ್ಲಿವೆ] ತಂತ್ರಜ್ಞಾನದ ಫಾಯಿದೆ ಅಲ್ಲಿಗೂ ಹಬ್ಬುತ್ತಿದೆ. ಎಷ್ಟೋ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲು ಹೊಸ ವಿ-ಸ್ಯಾಟ್‌ಗಳನ್ನು ಹಾಕಿಸಬೇಕಾಯಿತು. ವಿದ್ಯುತ್ ಸರಬರಾಜು ಇಲ್ಲದ, ಅಥವಾ ಅದರ ಖಾತ್ರಿಯಿಲ್ಲದ ಜಾಗಗಳಲ್ಲಿ ವಿಶೇಷ ಏರ್ಪಾಟುಗಳನ್ನು ಮಾಡಬೇಕಾಯಿತು. ಇದರಿಂದಾಗಿ ರಾಧೇಶ್ಯಾಂ ಮತ್ತು ಥಾಪಾಗೆ ಖರ್ಚಿಲ್ಲದೇ ಮನೆಗೆ ಹಣ ಕಳಿಸುವುದು ಸಾಧ್ಯವಾಗುತ್ತಿದೆ.

ಆದರೆ ಇದರಿಂದ ಆಂತರಿಕವಾಗಿ ಬ್ಯಾಂಕುಗಳಿಗೆ ಕೆಲವು ಪುಟ್ಟ ಸವಾಲುಗಳು ಹುಟ್ಟಿಕೊಂಡಿವೆ. ಈಗ ಬ್ಯಾಂಕುಗಳು ಶಾಖೆಗಳ ಸುತ್ತ ಏರ್ಪಾಟಾಗಿವೆ. ಆದರೆ ಈಗಿನ ತಂತ್ರಜ್ಞಾನದಿಂದ ಅಲ್ಲಿನ ಲಾವಾದೇವಿ ಶಾಖೆಯನುಸಾರ ನಡೆಯಬೇಕೆಂಬ ನಿಯಮವೇನೂ ಇಲ್ಲ. ಥಾಪಾ ಕೆ.ಗುಡಿಯ ಬ್ಯಾಂಕಿನ ಶಾಖೆಗೆ ಹೋಗಿ ತನ್ನು ಹಿಮಾಚಲದ ಎಕೌಂಟಿನಿಂದ ಹಣ ತೆಗೆಯಬಹುದು/ಪಾವತಿ ಮಾಡಬಹುದು. ಆದರೆ ಆ ಲಾವಾದೇವಿಯ ಲಾಭನಷ್ಟ ಸಲ್ಲುವುದು ಹಿಮಾಚಲದ ಎಕೌಂಟಿರುವ ಶಾಖೆಗೆ!

ಹೀಗಾಗಿ ಉತ್ತರಪ್ರದೇಶದಿಂದ ವಲಸೆ ಬಂದು ಮುಂಬಯಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಅನೇಕರಿಗೆ ಪ್ರಭಾದೇವಿಯ ಶಾಖೆಯಲ್ಲಿ ಹಣ ತುಂಬಲು ಕಿರಿಕಿರಿಯಾಗುತ್ತಿದೆಯಂತೆ... ಕಾರಣ, ಪ್ರಭಾದೇವಿಯ ಶಾಖೆಯಲ್ಲಿನ ಸರಾಸರಿ ಲಾವಾದೇವಿಯ ಮೊತ್ತಕ್ಕೆ ಹೋಲಿಸಿನೋಡಿದರೆ ಈ ಮೊತ್ತ ಸಣ್ಣದು. ಹೀಗಾಗಿ ಆ ಬ್ಯಾಂಕಿನ ಉದ್ಯೋಗಿಗಳಿಗೆ, ತಮ್ಮ ಶಾಖೆಯ ಲೆಕ್ಕಕ್ಕೇ ಬರದ ಈ ಪಾವತಿಯ ಕೆಲಸವನ್ನು ಅವರು ಮಾಡಬೇಕಾಗಿದೆ! ಬ್ಯಾಂಕಿಗೆ ಮುಂಚೆ ಡಿಡಿ ಕಮಿಷನ್ ಎಂದು ಬರುತ್ತಿದ್ದ ಆದಾಯವೂ ಖೋತಾ ಆಗಿದೆ. ಆದರೆ ಈ ಎಲ್ಲಕ್ಕೂ ಅಳವಡಿಸಿರುವ ತಂತ್ರಜ್ಞಾನಕ್ಕೆ ಖರ್ಚಂತೂ ಆಗಿದೆ!! ಹೀಗೆ ಬ್ಯಾಂಕುಗಳು ಈಗ ಎದುರಿಸಬೇಕಾಗಿರುವ ಸವಾಲುಗಳೇ ಭಿನ್ನರೀತಿಯಾದವು.

ಈ ತಂತ್ರಜ್ಞಾನದ ಬೆಳವಣಿಗೆಯಿಂದ ಥಾಪಾಗೂ, ರಾಧೇಶ್ಯಾಂಗೂ ಫಾಯಿದೆಯಾಗಿದೆಯಾದರೂ ಇವರು ಪ್ರತಿನಿಧಿಸುವುದು ಎಲ್ಲ ವಲಸೆ ಕಾರ್ಮಿಕರನ್ನಲ್ಲ. ಇವರುಗಳಿಗೆ ಬ್ಯಾಂಕಿನಲ್ಲಿ ಒಂದು ಎಕೌಂಟ್ ಇತ್ತು, ಅಥವಾ ಎಕೌಂಟು ತೆರೆಯಲು ಸಾಧ್ಯವಾಯಿತು. ಆದರೆ ಮರಗೆಲಸ ಮಾಡಲು ಜೋಧ್‍ಪುರದಿಂದ ಬಂದಿರುವ ಸವಾಯಿರಾಮ್‍ನ ತಂಡದ ಯಾರೊಬ್ಬರಿಗೂ ಬ್ಯಾಂಕಿನಲ್ಲಿ ಖಾತೆ ಇಲ್ಲ. ಹೀಗಾಗಿ ಈ ತಂತ್ರಜ್ಞಾನದ ಫಲ ಇನ್ನೂ ವ್ಯಾಪಕ ರೀತಿಯಲ್ಲಿ ಆಗಲು ಸಾಧ್ಯವಾಗಿಲ್ಲ.

ದಕ್ಷಿಣ ಆಫ್ರಿಕಾದ ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಫಾಯಿದೆಯನ್ನು ಒಂದು ಮಜಲು ಕೆಳಕ್ಕೆ ಒಯ್ದಿದ್ದಾರೆ. ಭಾರತದಲ್ಲಿ ಈ ತಂತ್ರಜ್ಞಾನದ ಪೂರ್ತಿ ಫಾಯಿದೆ ಎಲ್ಲಿ ಬ್ಯಾಂಕುಗಳ ಶಾಖೆ ಭೌತಿಕವಾಗಿ ನಿಂತಿದೆಯೋ ಆ ಕ್ಷೇತ್ರಗಳಿಗೆ ಸೀಮಿತವಾಗುತ್ತದೆ. ಅಂದರೆ ಹಣ ಪಾವತಿ ಮಾಡಲು, ಪಡೆಯಲು ಬ್ಯಾಂಕಿನ ಶಾಖೆಗೆ ಪ್ರಯಾಣ ಬೆಳೆಸಬೇಕಾದ್ದು ಅನಿವಾರ್ಯ. ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಬಳಕೆಯ ರೀತಿಯೇ ಕುತೂಹಲದ್ದು. ಅಲ್ಲಿಯ ಗ್ರಾಹಕರಿಗೆ ಬ್ಯಾಂಕು ಒಂದು ಕಾರ್ಡನ್ನು ನೀಡುತ್ತದೆ. ಆ ಕಾರ್ಡನ್ನು ಗ್ರಾಹಕರು ಕಿರಾಣೆಯಂಗಡಿಯಲ್ಲಿ ಉಪಯೋಗಿಸಬಹುದು. ಇದರಲ್ಲಿ ಹೊಸದೇನು ಎಂದು ಹುಬ್ಬೇರಿಸುವ ಮುನ್ನ ಒಂದು ಗಮ್ಮತ್ತಿನ ವಿಷಯವನ್ನು ಹೇಳುತ್ತೇನೆ -- ನಾವೆಲ್ಲರೂ ಡೆಬಿಟ್ ಕಾರ್ಡನ್ನು ಉಪಯೋಗಿಸಿದಾಗ ಮೂಲತಃ ಹಣ ನಮ್ಮ ಖಾತೆಯಿಂದ ಖಾಲಿಯಾಗಿ ಅಂಗಡಿಯವನ ಖಾತೆಗೆ ಸೇರುತ್ತದೆ. ಆದರೆ ಇದರ ವಿರುದ್ಧವಾದ ಉಪಯೋಗದಬಗ್ಗೆ ಯೋಚಿಸಬಹುದೇ? ಕಿರಾಣಿಯಂಗಡಿಯಲ್ಲಿ ಹಣ ಪಾವತಿ ಮಾಡಿ ಅದು ನಮ್ಮ ಖಾತೆಗೆ ಹೋದರೆ? ಹೀಗೆ ಭಾರತದಲ್ಲಿ ಕಾರ್ಡಿನ ಮೂಲಕ ಒಂದು ಮೊಬಲಗಿನ ಸಮಾನವಾದ ಸರಕನ್ನು ಪಡೆಯಬಹುದಾದ ಅರ್ಧ ಫಾಯಿದೆ ಮಾತ್ರವಿದ್ದರೆ, ಟೇಬಾಬ್ಯಾಂಕಿನವರು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಡೆಬಿಟ್ ಕಾರ್ಡನ್ನು ಸ್ವೀಕರಿಸುವ ಪ್ರತಿ ಕಿರಾಣೆಯಂಗಡಿಯೂ ಒಂದು ಪುಟ್ಟ ಲಾವಾದೇವಿಯ ಬ್ಯಾಂಕೇ ಆಗಿಬಿಡುತ್ತದೆ! ಈ ಪದ್ಧತಿಯನುಸಾರ ನಮ್ಮ ದೇಶದಲ್ಲಿ ೭೦,೦೦೦ ಶಾಖೆಗಳಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಎಷ್ಟು ಹೊಸ
ಕೊಂಡಿಗಳು ಸೇರಿಕೊಳ್ಳಬಹುದೋ ಊಹಿಸಿ!

ಆದರೆ ಟೇಬಾಬ್ಯಾಂಕಿನ ಉದಾಹರಣೆಗೂ ಬ್ಯಾಂಕಿನ ಎಕೌಂಟ್ ಬೇಕು. ಬ್ಯಾಂಕೇ ಇಲ್ಲದೆ ಹಣ ಪಾವತಿ ಮಾಡುವ ತಂತ್ರಜ್ಞಾನವಿರಬಹುದೇ? ಇದಕ್ಕೆ ನಮಗೆ ಉದಾಹರಣೆ ಸಿಗುವುದು ಕೀನ್ಯಾ ಮತ್ತು ಅಫಘಾನಿಸ್ಥಾನ ದೇಶಗಳಲ್ಲಿ. ಅರ್ಥಾತ್: ಉತ್ತಮವಾದ ಕೆಲವು ಪಾಠಗಳನ್ನು ಕಲಿಯಲು ನಾವು ಪಶ್ಚಿಮಾಭಿಮುಖವಾಗಿ ವಿಕಸಿತ ದೇಶಗಳನ್ನೇ ನೋಡಬೇಕಾಗಿಲ್ಲ. ಅಫಘಾನಿಸ್ಥಾನದಲ್ಲಿ ನಿಮಗೆ ರೋಷಾನೆ ಸಂಸ್ಥೆಯ ಮೊಬೈಲ್ ಫೋನಿದ್ದಲ್ಲಿ - ಬ್ಯಾಂಕಿನ ಎಕೌಂಟೂ ಬೇಕಿಲ್ಲ. ಏರ್ಟೈಮ್ ಮಾರುವ ಯಾವುದೇ ಮೂಲೆಯಂಗಡಿಗೆ ಹೋಗಿ ಹಣ ಪಾವತಿ ಮಾಡಿದರೆ ಆ ಬದಿಯಲ್ಲಿರುವ ಮೊಬೈಲ್ ಗ್ರಾಹಕನಿಗೆ ಒಂದು ಕೋಡ್ ಇರುವ ಎಸ್ಸೆಮ್ಮೆಸ್ ಹೋಗುತ್ತದೆ. ಆ ಎಸ್ಸೆಮ್ಮೆಸ್ಸನ್ನು ಹಿಡಿದು ಆತ ತನ್ನ ಸಮೀಪದ ಏರ್ಟೈಮ್ ಮಾರುವವನ ಬಳಿ ಹೋಗಿ ಹಣ ಪಡೆಯಬಹುದು. ಬ್ಯಾಂಕೂ ಬೇಡ, ಅಕೌಂಟೂ ಬೇಡ, ಖರ್ಚೂ ಕಡಿಮೆ, ಕಳುವೂ ಆಗುವುದಿಲ್ಲ, ತಕ್ಷಣ ಪಾವತಿ. ಬ್ಯಾಂಕಿನ ಶಾಖೆಗಳೇ ಇಲ್ಲದ ದಿನಗಳನ್ನು ನನ್ನ ಬದುಕಿನ ಕಾಲದಲ್ಲಿಯೇ ನೋಡಬಹುದೇ? ಟೆಲಿಪೋನ್ ಕಂಪನಿಯೇ ಬ್ಯಾಂಕಾಗುವುದನ್ನು ಕಾಣಬಹುದೇ. ಪೇಪರ್ ದುಡ್ಡೇ ಇಲ್ಲದ ದಿನವನ್ನು ನೋಡಬಹುದೇ? ಹಗಲುಗನಸುಗಳಿಗೆ ಅಂತ್ಯವಿಲ್ಲ.. ಆದರೂ ಒಂದೆಡೆಯಿಂದ ಇನ್ನೊಂದೆಡೆಗ ಬಡವರ ಹಣ ತಂತ್ರಜ್ಞಾನದ ಆಧಾರದ ಮೇಲೆ ಹೆಚ್ಚು ಖರ್ಚಿಲ್ಲದೇ ಓಡಾಡುತ್ತಿರುವುದೇ ಒಂದು ಮೌನ ಕ್ರಾಂತಿಯಲ್ಲವೇ?



No comments:

Post a Comment