Thursday, March 21, 2013

ಅಸ್ತಿತ್ವದ ಗುರುತಿನ ಚೀಟಿ


ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು.

ಆದರೆ ನಾವು ಯಾರು ಅನ್ನುವ ವಿಷಯ ದಿನನಿತ್ಯದ ಜೀವನದಲ್ಲಿ ಅನೇಕ ಬಾರಿ ನಾವು ಎದುರಿಸಬೇಕಾಗುತ್ತದೆ. ಹೀಗಾಗಿಯೇ ಎಲ್ಲಿ ಏನು ಹೊಸ ಕೆಲಸ ಮಾಡಬೇಕಿದ್ದರೂ ನಾನು ನಾನೇ ಅನ್ನುವುದನ್ನು ನಿರೂಪಿಸಿಯೇ ಮುಂದುವರೆಯಬೇಕಾಗುತ್ತದೆ. ಕೆಲವಾರು ಕಡೆ - ಉದಾಹರಣೆಗೆ ಹೊಸ ಗ್ಯಾಸ್ ಕನೆಕ್ಷನ್ ಪಡೆಯಲೋ, ಸರಕಾರೀ ಬಿಎಸ್ಎನ್ಎಲ್ ನಿಂದ ಲ್ಯಾಂಡ್ ಲೈನ್ ಪಡೆಯಲೋ ಪ್ರಯತ್ನಿಸಿದಾಗಲೂ ಅವರುಗಳು ಕೇಳುವ ನೀವುಯಾರು ಅನ್ನುವ ಪ್ರಶ್ನೆಗೆ ಅವರಿಗೆ ಸಮಾಧಾನಕರವಾದ ಉತ್ತರ ನೀಡಲು ಒಮ್ಮೊಮ್ಮೆ ನಾವೂ ವೇದಾಂತದ ಮೊರೆ ಹೋಗಬೇಕಾಗುತ್ತದೆ.

ನಾನು ಯಾರು ಅನ್ನುವ ಈ ಗಹನ ಪ್ರಶ್ನೆ ಈಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತಿದ್ದರೂ, ಹಾಗೂ ಈ ಪ್ರಶ್ನೆಯನ್ನು ತಲೆತಲಾಂತರದಿಂದ ನಾವುಗಳು ಕೇಳಿಕೊಳ್ಳುತ್ತಾ ಬಂದಿದ್ದರೂ ಇದನ್ನು ಒಂದು ಅಜೆಂಡಾ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ಕೇಳಿದವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು. ದೇಶದ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಶೇಷನ್ ಅವರಿಗೆ ಈ ವಿಷಯ ಮುಖ್ಯವಾದದ್ದು ಯಾಕೆ - ಅವರಿಗಿಂತ ಮೊದಲೂ ಚುನಾವಣಾ ಆಯುಕ್ತರಿದ್ದರು, ಒಂದೇ ದಿನದಲ್ಲಿ ಇಡೀ ದೇಶದಲ್ಲಿ ಚುನಾವಣೆಗಳಾಗುತ್ತಿದ್ದುವು, ಎರಡು ದಿನಗಳಕಾಲ ಮತಗಣನೆ ನಡೆಯುತ್ತಿತ್ತು. ಆದರೆ ಶೇಷನ್ ತಮ್ಮ ಕಾರ್ಯವ್ಯಾಪ್ತಿಯ ಪರಿಭಾಷೆಯನ್ನು ಮೂಲಭೂತವಾಗಿ ಪರಿವರ್ತಿಸಿಬಿಟ್ಟರು. ಚುನಾವಣೆ ನಡೆಸುವ ಲಾಜಿಸ್ಟಿಕ್ ಕೆಲಸವನ್ನು ಅವರು ಪ್ರಜಾತಂತ್ರದ ಮೂಲಭೂತ ಸೂತ್ರಗಳನ್ನು ಕಾಪಾಡುವ ಕೆಲಸವಾಗಿ ಪರಿಗಣಿಸಲು ಪ್ರಯತ್ನಿಸಿದರು. ಹೀಗಾಗಿ ಶೇಷನ್ ತಮ್ಮ ಕಾಲದಲ್ಲಿ ಜನಪ್ರತಿನಿಧಿಗಳು ನಿಜಕ್ಕೂ ಜನಪ್ರತಿನಿಧಿಗಳಾಗಿರಬೇಕೆಂದು ನಂಬಿದ್ದರಿಂದ - ಎರಡು ಕೆಲಸಗಳನ್ನು ಕೈಗೊಂಡರು. ಚುನಾವಣೆಯನ್ನು ಕಾಗದದ ಮೇಲೆ ಮತ ಗುದ್ದುವ ಪ್ರಕ್ರಯೆಯಿಂದ ಯಂತ್ರದ ಮೇಲೆ ಗುಂಡಿ ಒತ್ತುವ ಪ್ರಕ್ರಿಯೆಯನ್ನಾಗಿ ಪರಿವರ್ತಿಸುವುದು ಮೊದಲನೆಯದ್ದಾದರೆ, ಈ ಒತ್ತುವ ವ್ಯಕ್ತಿ ಯಾರು ಎನ್ನುವ ಪುರಾವೆಯನ್ನೂ ಆತ ಕೇಳಿದರು. ಹೀಗೆ ಮೊದಲಬಾರಿಗೆ ದೇಶವ್ಯಾಪಿಯಾಗಿ ನಾನು ಯಾರು ಅನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಶೇಷನ್ ನಮನ್ನೆಲ್ಲ ಪ್ರೋತ್ಸಾಹಿಸಿದರು. ಆಗಿನ ದಿನಗಳಲ್ಲಿ ಶೇಷನ್ ಊರೂರು ಅಲೆದು ಈ ಬಗ್ಗೆ ಭಾಷಣಗಳನ್ನು ಬಿಗಿದರು, ಹೆದರಿದವರನ್ನು ಹೆದರಿಸಿದರು. ಚುನಾವಣೆಯನ್ನು ಈ ಕಾರಣಕ್ಕಾಗಿ ತಮಗೆ ಕೈಲಾದಷ್ಟು ಮುಂದೂಡಿದರು.... ಹೀಗೆ ಮಾಡಿದ ಅಸ್ತಿತ್ವದ ಅನ್ವೇಷಣೆಗೆ ಶೇಷನ್ ಅವರ ಕೊಡುಗೆ ಮಹತ್ವದ್ದೆಂದು ನಾವು ಒಪ್ಪಲೇಬೇಕಾಗುತ್ತದೆ.

ದೇಶದಲ್ಲಿ ಓಟು ಚಲಾಯಿಸುವ ಪ್ರತಿವ್ಯಕ್ತಿಯೂ ಎಪಿಕ್ - ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ - ಹೊಂದಿರಬೇಕು ಎನ್ನುವ ನಿಯಮ ಒಂದು ರೀತಿಯಲ್ಲಿ ಚಾಲನೆಗೆ ಬಂತಾದರೂ ಈ ಗುರುತಿನ ಚೀಟಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಮೇಲೆ ಹೇರಲಾಯಿತು. ಅನೇಕರಿಗೆ ಕಾಂಟ್ರಾಕ್ಟುಗಳನ್ನು ಕೊಡಲಾಯಿತು. ಕೈದಿಗಳ ರೀತಿಯಲ್ಲಿ ಸ್ಲೇಟಿನ ಮೇಲೆ ಹಸರನ್ನು ಬರೆದು ಫೋಟೋ ಇಳಿದದ್ದೂ ಆಯಿತು. ಆದರೆ ಈ ಯೋಜನೆ ಒಂದೇ ಕೇಂದ್ರದಿಂದ ಬರಲಿಲ್ಲವಾದ್ದರಿಂದ - ಇಂಗ್ಲೀಷ್ ಅಲ್ಲದೇ ಸ್ಥಳೀಯ ಭಾಷೆಯಲ್ಲೂ ವಿವರಗಳನ್ನು ಮುದ್ರಿಸಬೇಕಾಯಿತಾದ್ದರಿಂದ, ವಿಪರೀತ ತಪ್ಪುಗಳು ನಡೆದವು. ಅನೇಕ ಜನರ ಲಿಂಗವೇ ಈ ಪ್ರಕ್ರಿಯೆಯ ಮೂಲಕ ಬದಲಾಗಿಬಿಟ್ಟಿತ್ತು. ಫೋಟೋದಲ್ಲಿ ಗಿರಿಜಾ ಮೀಸೆ ಹೊತ್ತ ಗಂಡಸಿನ ಲಿಂಗವನ್ನು ಸ್ತ್ರೀ ಎಂದು ಅಕ್ಷರಗಳಲ್ಲಿ ಘೋಷಿಸಲಾಗಿತ್ತು. ನಮ್ಮ ಕ್ಯಾಂಪಸ್ಸಿನಲ್ಲಿದ್ದ ಎಲ್ಲ ಮಹಿಳೆಯರಿಗೂ ಮದುವೆ ಮಾಡಿಸಿದ್ದಲ್ಲದೇ, ಎಲ್ಲರನ್ನೂ ವಾಸ್ವಾನಿ ಅನ್ನುವ ಮನುಷ್ಯನ ಪತ್ನಿಯನ್ನಾಗಿ ಈ ಗುರುತಿನ ಚೀಟಿಗಳು ಮಾಡಿಬಿಟ್ಟಿದ್ದುವು! ಗುರುತಿನ ಚೀಟಿಯ ಫಲವಾಗಿ ಕೆಲವರು ಗುರುತೇ ತಿಳಿಯದಂತೆ ಬದಲಾಗಿಬಿಟ್ಟಿದ್ದರು.

ಹೀಗೆ ಉದಾತ್ತ ಉದ್ದೇಶದಿಂದ ಪ್ರಾರಂಭಿಸಿದ ಈ ಗುರುತಿನ ಚೀಟಿಯ ಕಾರ್ಯಕ್ರಮ ಜನರ ಅಸ್ತಿತ್ವವನ್ನೇ ಬದಲಿಸುವ ಕಾರ್ಯಕ್ರಮವಾದ್ದರಿಂದ - ಭಾರತೀಯನ ಪ್ರಾಥಮಿಕ ಗುರುತಿನ ಚೀಟಿಯಾಗದೇ - ಮತ್ತೂ ಒಂದು ಗುರುತಿನ ಚೀಟಿಯಾಗಿಬಿಟ್ಟಿತು. ದೇಶದ ಭದ್ರತೆಯನ್ನು ಕಾಪಾಡಲು, ಈ ರೀತಿಯ ಗುರುತಿನ ಚೀಟಿಗಳ ಅವಶ್ಯಕತೆಯಿದೆ ಅನ್ನುವುದರಲ್ಲಿ ಹೆಚ್ಚು ಅನುಮಾನವಿದ್ದಂತಿಲ್ಲ. ಆದರೆ ಈ ಗುರುತಿನ ಚೀಟಿ ಈಗ ಅನೇಕ ರೂಪಗಳನ್ನು ಪಡೆದಿದೆ. ವಿದೇಶಕ್ಕೆ ಹೋಗುವ ಆಲೋಚನೆಯಿದ್ದರೆ ಪಾಸ್ಪೋರ್ಟೂ, ಆದಾಯ ತೆರಿಗೆ ತೆತ್ತಿದರೆ ಪ್ಯಾನ್ ಕಾರ್ಡೂ, ವಾಹನ ಚಲಾಯಿಸುವವರಿಗೆ ಕೊಟ್ಟಿರುವ ಲೈಸೆನ್ಸು, ಪಡಿತರ ಚೀಟಿ... ಯಾವುದೂ ನಮ್ಮ ಗುರುತಿನ ಚೀಟಿಯಾಗಬಹುದು. ಅಲ್ಲಿ ನೋಂದಾಯಿಸುವ ವಿವರಾನುಸಾರ ನಾವುಗಳು ಏಕಕಾಲಕ್ಕೆ ಭಿನ್ನ ವ್ಯಕ್ತಿಗಳೂ ಆಗಬಹುದು....

ಈ ಅಸ್ತಿತ್ವ ಮತ್ತು ಗುರುತಿನ ಚೀಟಿ, ನಮ್ಮಂತಹ ದೇಶದಲ್ಲಿ ಯಾಕೆ ಮುಖ್ಯವಾಗುತ್ತದೆ ಅನ್ನುವುದು ಕುತೂಹಲದ ಪ್ರಶ್ನೆ. ಎಲ್ಲರಿಗೂ ಗುರುತಿನ ಚೀಟಿ ಕೊಡುವುದರಿಂದ, ದೇಶದ ಭದ್ರತೆಯನ್ನು ಕಾಪಾಡಿದಂತಾಗುವುದೇ? - ಮುಂಬಯಿ ಕಾಂಡದಲ್ಲಿ ಭಾಗವಹಿಸಿದ್ದ ಭಯೋತ್ಪಾದಕರು ಯಾವ ಗುರುತಿನ ಪತ್ರವನ್ನೂ ಹೊಂದಿರಲಿಲ್ಲ ಎನ್ನುವುದನ್ನು ಶಶಿ ಥರೂರ್ ತಮ್ಮದೇ ರೀತಿಯಲ್ಲಿ ಹೇಳಿ ಹೊಸ ವೀಸಾದ ನಿಯಮವನ್ನು ಲೇವಡಿ ಮಾಡಿದ್ದಾರೆ. ಅದೇ ವಾದಸರಣಿ ಗುರುತಿನ ಚೀಟಿಗೂ ಅನ್ವಯಿಸುತ್ತದೆ. ಆದರೂ ಗುರುತಿನ ಚೀಟಿ ಅನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಒಂದು ದಶಕದ ಹಿಂದೆ ಕಾಣದಿದ್ದ ಈಗ ಎಲ್ಲೆಲ್ಲೂ ಕಾಣುವ ಅಂಶವೆಂದರೆ ಎಲ್ಲರ ಕತ್ತಿನಲ್ಲೂ ಒಂದಲ್ಲ ಒಂದು ರೀತಿಯ ಗುರುತಿನ ಚೀಟಿಯ ಹಾರವನ್ನು ಕೆಲಸದ ವೇಳೆಯಲ್ಲಿ ಕಾಣಬಹುದು.

ಇದಕ್ಕೆ ಕಾರಣ ಬರೇ ಭದ್ರತೆ ಮಾತ್ರವಲ್ಲ, ಬದಲಿಗೆ ತಂತ್ರಜ್ಞಾನವೂ ಮೂಲಭೂತವಾಗಿ ಬದಲಾಗುತ್ತಿದೆ. ಮೊದಲು ನಮ್ಮದೇ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ವಾಚ್ ಮನ್ ಆಗಿ ನಿಯಮಿಸುತ್ತಿದ್ದೆವು ಎಂದುಕೊಳ್ಳಿ. ಈಗ ಆ ಕೆಲಸ ಹೊರಗಿನ ಸೆಕ್ಯೂರಿಟಿ ಸಂಸ್ಥೆಗೆ ಔಟ್ ಸೊರ್ಸ್ ಮಾಡಲಾಗಿದೆ. ಹೀಗಾಗಿ ವಾಚ್ ಮನ್ ಆಗಿ ಅಲ್ಲಿ ನಿಲ್ಲುವವನಿಗೆ ಕಂಪನಿಯ ಚೇರ್ಮನ್ನರಿಂದ ಹಿಡಿದು ಚಪ್ರಾಸಿಯವರೆಗೂ ಎಲ್ಲರೂ ಸಮಾನರೇ.. ಗುರುತಿನ ಚೀಟಿಯ ಆಧಾರವೇ ಪ್ರವೇಶಕ್ಕೆ ಮೂಲ ದಾಖಲೆಯಾಗುತ್ತದೆ. ಇನ್ಪೋಸಿಸ್ ನಲ್ಲಿ ನಾರಾಯಣ ಮೂರ್ತಿಯನ್ನು ಗುರುತಿನ ಚೀಟಿ ಕೇಳಿದ ಸೆಕ್ಯೂರಿಟಿ ಗಾರ್ಡಿನ ಕಥೆ ಜನಜನಿತವಾಗಿಯೇ ಇದೆ. ಹೀಗೆ ಒಬ್ಬ ವ್ಯಕ್ತಿಗೆ ಒಂದು ಗುರುತಿನ ಚೀಟಿ, ಒಂದು ಗುರುತಿನ ಚೀಟಿಗೆ ಒಬ್ಬ ವ್ಯಕ್ತಿ ಅನ್ನುವ ನಿಯಮದ ಮೇಲೆ ಇದು ನಡೆಯುತ್ತಿದೆ.

ತಂತ್ರಜ್ಞಾನ ಮಾತ್ರ ಗುರುತಿನ ಚೀಟಿಗಳು ಮುಖ್ಯವಾಗುವುದಕ್ಕೆ ಕಾರಣವಲ್ಲ. ನಾವುಗಳು ನಮ್ಮ ಮಧ್ಯತರಗತಿಯ ನೌಕರಿಯ ಚೌಕಟ್ಟಿನಾಚೆಗೆ ಹೋದರೆ ಇದರ ಮಹತ್ವದ ಭಿನ್ನ ಮಜಲುಗಳು ನಮಗೆ ಅರ್ಥವಾಗುತ್ತದೆ. ಸರಕಾರೀ ಸಹಾಯ ಒದಗಿಸಬೇಕಾದರೆ, ಆ ಸಹಾಯ ಅಥವಾ ಸಬ್ಸಡಿ ಕೇವಲ ಬಡವರಿಗೆ ಮಾತ್ರ ತಲುಪಬೇಕು ಅನ್ನುವುದಾದರೆ, ನರೇಗಾದಡಿಯಲ್ಲಿ ನೂರುದಿನಗಳ ಕೆಲಸ ಬಡವರಿಗೆ ಒದಗಿಸಬೇಕಾದರೆ - ಅದು ಯಶಸ್ವಿಯಾಗಿ ತಲುಪಬೇಕಾದವರಿಗೆ ತಲುಪಲು ಯಾರು ಎನ್ನುವ ಗುರುತು ಅನಿವಾರ್ಯವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬೊಬ್ಬರಿಗೂ ಅನೇಕ ಗುರುತಿನ ಚೀಟಿಗಳು ಇರುವ ಸಾಧ್ಯತೆಯಿದೆ. ಅಥವಾ ಗುರುತಿನ ಚೀಟಿ ಲಭಿಸದೇ ಇರುವ ಸಾಧ್ಯತೆಯೂ ಇದೆ.. ನಾನು ಯಾರೆಂದು ತಿಳಿಯದಯೇ ಇದ್ದರೆ ನನಗೆ ನೀವು ಕೆಲಸ ಕೊಡುವುದಾದರೂ ಹೇಗೆ... ಹೀಗಾಗಿ ಸರಕಾರದ ಸೇವೆಗಳು ಹೆಚ್ಚೆಚ್ಚು ಗುರಿ ಮುಟ್ಟಬೇಕೆಂದಿದ್ದರೆ, ಅದು ಸರಿಯಾದ ಗುರಿಯನ್ನು ಮುಟ್ಟುತ್ತಿದೆ ಅನ್ನುವ ಪುರಾವೆಯೂ ನಮಗೆ ಬೇಕಾಗುತ್ತದೆ. ಏನೂ ಇಲ್ಲದ ಬಡವರಿಗೆ - ಗುರುತಿನ ಚೀಟಿಯ ಅಸ್ತಿತ್ವ ಸಿಕ್ಕರೆ - ಅದೇ ಅವರ ಆತ್ಮಭಿಮಾನಕ್ಕೆ ಎಷ್ಟು ಪೂರಕವಾಗಬಹುದು ಅನ್ನುವದನ್ನು ಯೋಚಿಸಿನೋಡಿದಾಗ ಈ ಗುರುತಿನ ಚೀಟಿಗಳ ಮಹತ್ವದ ಅರಿವು ನಮಗಾಗುತ್ತದೆ.

ಓಟು ಹಾಕುವುದು ಒಬ್ಬ ನಾಗರೀಕನಾಗಿ ನನಗೆ ದಕ್ಕಿರುವ ಹಕ್ಕು. ಆದರೆ ಓಟು ಹಾಕಲು ಹೋದ ದಿನ ನನ್ನ ಹೆಸರಿನಲ್ಲಿ ಯಾರೋ ಬೇರೂಬ್ಬರು ನನ್ನ ಮತವನ್ನು ಗುದ್ದಿ - ಅಥವಾ ಒತ್ತಿ - ಬಂದಿದ್ದರೆ -- ನನ್ನ ಹಕ್ಕನ್ನು ಯಾರೋ ಕಿತ್ತುಕೊಂಡಂತೆ ಆಗುವುದಲ್ಲದೇ, ನನ್ನ ಅಭಿಪ್ರಾಯ ನೋಂದಾಯಿತವಾಗದೆಯೇ ನನ್ನನ್ನು ಪ್ರತಿನಿಧಿಸುತ್ತೇನೆನ್ನುವ ವ್ಯಕ್ತಿ ಚುನಾಯಿತನಾಗುಬಿಡುತ್ತಾನೆ. ಹೀಗಾಗಿ ಪ್ರಜಾತಂತ್ರದಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಗುರುತಿನ ಚೀಟಿ ನಾನು ನಾನೇ ಎಂದು ನಿರೂಪಿಸಲು ಎಷ್ಟು ಮುಖ್ಯವೋ, ಬೇರಾರೂ ನಾನಲ್ಲ ಎಂದು ನಿರೂಪಿಸಲೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿಯೇ ಶೇಷನ್ ಅವರು ಹಾಕಿದ್ದ ಯೋಜನೆಯಲ್ಲಿ ಪ್ರಜಾತಂತ್ರವನ್ನು ಶಕ್ತಿಶಾಲಿಯನ್ನಾಗಿ ಮಾಡುವ ದೊಡ್ಡ ಅಜೆಂಡಾ ಇತ್ತು. ಬಹುಶಃ ಈ ಅಜೆಂಡಾ ಅಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿದ್ದರಿಂದಲೇ ವಿಫಲವಾಯಿತೋ ಏನೋ... ಆದರೂ ದೇಶಾದ್ಯಂತ ಕಾಗದ ಗುದ್ದುವುದರಿಂದ, ಗುಂಡಿ ಒತ್ತುವ ತಂತ್ರಜ್ಞಾನದತ್ತ ದೊಡ್ಡ ಹೆಜ್ಜೆಗಳನ್ನಿಡುವತ್ತ ಮಾತ್ರ ಶೇಷನ್ ಸಫಲರಾದರು.

ಶೇಷನ್ ಕಾಲಕ್ಕೂ ಈದಿನಕ್ಕೂ ಕಾಲ ಮತ್ತು ತಂತ್ರಜ್ಞಾನ ಎರಡೂ ಬದಲಾಗಿದೆ. ಈ ಬದಲಾವಣೆಯನ್ನು ಪ್ರತಿನಿಧಿಸುತ್ತಾ ಗುರುತಿನ ಚೀಟಿಗಳ ಅಜೆಂಡಾ ಹೊತ್ತು ನಂದನ್ ನಿಲೇಕಣಿ ಹೊರಟಿದ್ದಾರೆ. ಇದು ಈ ಬಾರಿ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಆದರೆ ನಂದನ್ ಸಫಲರಾಗುವರೇ.. ಅವರಿಗೆ ಸಾಫಲ್ಯ ಸುಲಭವಾಗಿ ದಕ್ಕುವುದಿಲ್ಲವಾದರೂ ಅವರು ಎದುರಿಸುವ ಸವಾಲುಗಳೇ ಬೇರೆ. ಹೀಗಾಗಿ ನಂದನ್ ವಿಫಲರಾಗುವುದಕ್ಕೆ ಇರುವ ಕಾರಣಗಳು ಅವರು ಸಫಲರಾಗುವುದಕ್ಕೆ ಇರುವ ಕಾರಣಗಳಿಗಿಂತ ಹೆಚ್ಚಾಗಿದೆ.!!!! ಆ ಬಗ್ಗೆ ಮುಂದಿನ ಬಾರಿ.




No comments:

Post a Comment