Thursday, March 21, 2013

ಯಂತ್ರ-ಮಾನವ ದ್ವಂದ್ವ!



ಹಲವು ವರ್ಷಗಳ ಹಿಂದೆ ಕೆನಡಾದ ಕ್ಯುಬೆಕ್ ಪ್ರಾಂತಕ್ಕೆ ಅಲ್ಲಿನ ಸಹಕಾರ ಸಂಘಗಳನ್ನು ಅಧ್ಯಯನ ಮಾಡಲು ಹೋಗಿದ್ದೆ. ಆಗ ಫ್ರಾಂಮ್ಟನ್ ಅನ್ನುವ ಒಂದು ಪುಟ್ಟ ಹಳ್ಳಿಯಲ್ಲಿದ್ದ ಸಹಕಾರ ಸಂಘವನ್ನು ಭೇಟಿಮಾಡುವ ಅವಕಾಶ ಸಿಕ್ಕಿತ್ತು. ಆ ಹಳ್ಳಿಯ ಸಹಕಾರ ಸಂಘ [ಕೇಸ್ ಪಾಪ್ಯುಲೇರ್]ದ ಮ್ಯಾನೇಜರ್ ಒಂದು ರೀತಿಯ ದುಃಖದಲ್ಲಿದ್ದ. ನಮ್ಮ ದೇಶದ ಹಾಗೆಯೇ ಮೂರು ಮಜಲಿನ ಸಹಕಾರೀ ವ್ಯವಸ್ಥೆಯಲ್ಲಿ ಫ್ರಾಂಮ್ಟನ್ ಹಳ್ಳಿಸ್ಥರದ ಸಹಕಾರೀ ಸಂಸ್ಥೆ. ಅದರ ಮೇಲೆ ಹಲವು ಪ್ರಾಂತೀಯ ಸಂಸ್ಥೆಗಳ ಒಕ್ಕೂಟ ಹಾಗೂ ಆಮೇಲೆ ರಾಜ್ಯಸ್ಥರದ ಸಹಕಾರೀ ಬ್ಯಾಂಕು. ಎಲ್ಲವೂ ನಮ್ಮಂತೆಯೇ. ವ್ಯತ್ಯಾಸವಿಷ್ಟೇ - ಒಟ್ಟಾರೆ ಆ ಸಹಕಾರ ವ್ಯವಸ್ಥೆ ಹೆಚ್ಚಿನ ಖರ್ಚಿನದ್ದಾಗಿದ್ದು ಲಾಭವನ್ನು ಮಿಕ್ಕ ಬ್ಯಾಂಕುಗಳಷ್ಟು ಆರ್ಜಿಸುತ್ತಿರಲಿಲ್ಲ. ಅದಕ್ಕಾಗಿ ವ್ಯವಸ್ಥೆಯಲ್ಲಿ ಆಂತರಿಕ ಅಧ್ಯಯನಗಳೂ ರಣನೀತಿಗಳೂ ತಯಾರಾಗತೊಡಗಿದ್ದುವು.

ಅನೇಕ ಸೂತ್ರಗಳನ್ನು ಆ ವ್ಯವಸ್ಥೆ ಪರಿಶೀಲಿಸುತ್ತಿತ್ತಾದರೂ ಒಂದು ಅಂಶ ಎದ್ದು ಕಾಣಿಸುತ್ತಿತ್ತು. ಬೂಜ್ ಆಲೆನ್ ಸಂಸ್ಥೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಬ್ಯಾಂಕಿನ ಕೌಂಟರಿನಲ್ಲಿ ನಡೆವ ಪ್ರತೀ ಲಾವಾದೇವಿಗೂ ಸುಮಾರು ೧.೦೭ ಡಾಲರ್‌ನಷ್ಟು ಖರ್ಚಾಗುತ್ತಿತ್ತು. ಆ ವ್ಯವಹಾರವನ್ನು ಕೌಂಟರಿನಿಂದ ತೆಗೆದು ಪಕ್ಕದ ಎ.ಟಿ.ಎಂಗೆ ಹಾಕಿದರೆ - ಅರ್ಥಾತ್ ಯಂತ್ರೀಕರಿಸಿದರೆ ಅದರ ಒಟ್ಟಾರೆ ಖರ್ಚು ಐವತ್ತೈದು ಸೆಂಟು, ದೂರವಾಣಿಯ ಮೂಲಕ ವ್ಯಾಪಾರ ನಡೆಸಿದಲ್ಲಿ ಖರ್ಚು ೨೬ ಸೆಂಟುಗಳು ಹಾಗೂ ಇಂಟರ್ನೆಟ್ ವ್ಯಾಪರಕ್ಕೆ ಆಗುವ ಖರ್ಚು ಪ್ರತಿ ವ್ಯವಹಾರಕ್ಕೆ ಒಂದು ಸೆಂಟು ಅನ್ನುವ ವಿಚಾರ ಹೊರಬಿದ್ದಿತ್ತು. ಹೀಗಾಗಿ ಬ್ಯಾಂಕಿನ ಖರ್ಚನ್ನು ಕಡಿಮೆ ಮಾಡಲು ಗ್ರಾಹಕರನ್ನು ಕೌಂಟರಿನಿಂದ ಏಟಿ‌ಎಂಗೆ, ಅಲ್ಲಿಂದ ಇಂಟರ್ನೆಟ್ಟಿಗೆ ಕಳಿಸುವ ಯೋಜನೆಯನ್ನು ಆ ಒಕ್ಕೂಟ ರೂಪಿಸಿತ್ತು.

ಒಕ್ಕೂಟದವರು ಹೇಳಿದ್ದರಂತೆ: "ಜನ ಯಂತ್ರದತ್ತ ಹೋಗಲು ತಕ್ಷಣ ಒಪ್ಪುವುದಿಲ್ಲ. ಆದರೆ ನಾವುಗಳು ಖರ್ಚು ಕಡಿಮೆ ಮಾಡಲು ಯಂತ್ರಗಳನ್ನು ಹೆಚ್ಚು ಹೆಚ್ಚು ಬಳಸುವ ಅವಶ್ಯಕತೆಯಿದೆ. ಹೀಗಾಗಿ ಅವರು ಆ ಕಡೆಗೆ ಹೋಗಲು ತಯಾರಿಲ್ಲದಿದ್ದರೆ, ಕೌಂಟರಿನಲ್ಲಿನ ಸೇವೆಯ ಗುಣಮಟ್ಟವನ್ನು ಕಡಿಮೆ ಮಾಡಿಯಾದರೂ ಅವರನ್ನು ಅತ್ತ ಅಟ್ಟಿ. ಯಾಕೆಂದರೆ ಸಂಸ್ಥೆಯ ಲಾಭಾಂಶ ಒಂದು ಮಟ್ಟದಲ್ಲಿರಲು ಈ ಬೆಳವಣಿಗೆ ಅವಶ್ಯಕ.."
ಅವನ ಕೆಲಸವನ್ನು ಆ ಹಳ್ಳಿಯ ಗ್ರಾಹಕರೇನೂ ಸುಸೂತ್ರಗೊಳಿಸಲಿಲ್ಲ. ಆ ಹಳ್ಳಿಯಲ್ಲಿ ಕೃಷಿ ಕೈಗೊಂಡು ಜೀವಿಸುತ್ತಿದ್ದ ಜನರ ಸರಾಸರಿ ವಯಸ್ಸು ಹೆಚ್ಚೇ ಇತ್ತು. ಹಳ್ಳಿಯಲ್ಲಿ ಹುಟ್ಟಿದ್ದ ಯುವಕರ ಬಹುಭಾಗ ಓದು ಕೆಲಸವೆಂದು ಮಾಂಟ್ರಿಯಲ್, ಕ್ಯುಬೆಕ್ ನಗರಗಳನ್ನು ಸೇರಿ ಊರನ್ನು ಬಿಟ್ಟಿದ್ದರು. ಅಲ್ಲಿನ ಗ್ರಾಹಕರು ಬ್ಯಾಂಕಿಗೆ ಬಂದು ಕೌಂಟರಿನ ಮುಂದೆ ಕಾಯಲು ತಯಾರಾಗಿದ್ದರೇ ಹೊರತು ಎ.ಟಿ.ಎಂನತ್ತ ತಿರುಗಿನೋಡಲೂ ತಯಾರಿರಲಿಲ್ಲ. ಕಾರಣ: ಅವರಿಗೆ ಯಂತ್ರದಿಂದ ಉಂಟಾಗುವ ತೀವ್ರತೆ ಮತ್ತು ಎಫಿಷಿಯಂಸಿಯ ಅವಶ್ಯಕತೆಯೇ ಇರಲಿಲ್ಲ!

ಆದರೆ ಮ್ಯಾನೇಜರು ಹೇಳಿದ ಕಥೆಯೂ ಕುತೂಹಲದ್ದು: "ನಮ್ಮ ಗ್ರಾಹಕರು ನನಗೇ ತಿರುಗೇಟು ಹಾಕಿದರು. ನೀನು ಯಾಕೆ ನಮ್ಮನ್ನು ಯಂತ್ರದತ್ತ ಕಳುಹಿಸುತ್ತಿದ್ದೀಯೋ ನಮಗೆ ಗೊತ್ತು. ಆದರೆ ನಾವು ಇಲ್ಲಿಗೆ ಬರುವುದು ಹಣದ ವ್ಯವಹಾರಕ್ಕಾಗಿ ನಿಜ, ಆದರೆ ನಮಗೆ ಈ ಸಮಯದಲ್ಲಿ ಇತರರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ, ಹರಟೆಕೊಚ್ಚಲು ಸಾಧ್ಯವಾಗುತ್ತದೆ. ಮನೆಗೆ ಹೋಗಿ ನಾವು ಮಾಡುವುದಾದರೂ ಏನು? ಇಲ್ಲಿ ಸ್ವಲ್ಪ ಸಮಯವೂ ಕಳೆಯುತ್ತದೆ"

ಗ್ರಾಹಕರು ಹೇಳಿದ ಮುಂದಿನ ಮಾತೆಂದರೆ: "ನೀನು ನಮ್ಮನ್ನು ಯಂತ್ರದತ್ತ ಅಟ್ಟಿದರೆ - ನಿನ್ನ ಅವಶ್ಯಕತೆಯೇ ಇಲ್ಲವಾಗಿ ಮೊದಲಿಗೆ ನಿನ್ನ ಕೆಲಸವೇ ಹೋಗುತ್ತದೆ. ಹೀಗಾಗಿ ನೀನು ಕೌಂಟರಿನಲ್ಲಿ ನಮಗೆ ಸೇವೆ ನೀಡುವುದೇ ನಿನಗೂ ಒಳ್ಳೆಯದು"

ಈ ರಣನೀತಿಯ ಭಾಗವಾಗಿದ್ದ ಮ್ಯಾನೇಜರ್‌ಗೆ ಇದು ಪೀಕಲಾಟದ ವಿಷಯವಾಗಿತ್ತು. "ಏನೇ ಆದರೂ ನನ್ನ ಕೆಲಸ ಹೋಗಬಹುದು" ಎಂದು ಅವನು ಹೇಳಿದ್ದ. "ಯಾಕೆಂದರೆ, ಈ ರಣನೀತಿಯನ್ನು ಅಮಲು ಮಾಡಿದಲ್ಲಿ ಮನುಷ್ಯರು ಮಾಡುವ ಕೆಲಸವನ್ನು ಯಂತ್ರಗಳ ಸುಪರ್ದಿಗೆ ಸ್ವಲ್ಪವಾದರೂ ಒಪ್ಪಿಸಿದಾಗ ಉದ್ಯೋಗಿಗಳ ಅವಶ್ಯಕತೆ ಕಡಿಮೆಯಾಗಿ ನನ್ನನ್ನು ಮನೆಗಟ್ಟುತ್ತಾರೆ ಅಮಲು ಮಾಡದಿದ್ದರೆ ನನ್ನ ಸಂಘ ದುಬಾರಿ ಸಂಘವಾದ್ದರಿಂದ ಮುಚ್ಚಿ ಹಾಕುತ್ತಾರೆ!"

ಆತನ ದೃಷ್ಟಿಯಿಂದ ಹೇಗೇ ಆದರೂ ಇದು ಗೆಲ್ಲುವ ದಿಕ್ಕಿಗೆ ಹೋಗುವ ಕೆಲಸವಾಗಿರಲಿಲ್ಲ. ಈ ವ್ಯತ್ಯಾಸವನ್ನು ನಾವು ಮುಖ್ಯವಾಗಿ ನಗರ ಪ್ರದೇಶದ ನಮ್ಮ ಬ್ಯಾಂಕುಗಳಲ್ಲೂ ನೋಡುತ್ತಿದ್ದೇವೆ. ಬ್ಯಾಂಕುಗಳು ನೀಡುತ್ತಿದ್ದ ಪ್ರತೀ ಸೇವೆಗೂ ನಿಧಾನವಾಗಿ ಶುಲ್ಕವನ್ನು ಹೇರುತ್ತಿರುವುದನ್ನು ನಾವು ನೋಡಬಹುದು. ಮೊದಲಿಗೆ ಚೆಕ್ ಬುಕ್ಕುಗಳು ಮುಫತ್ತಾಗಿದ್ದುವು - ಈಗ ಒಂದು ಮಟ್ಟಕ್ಕಿಂತ ಹೆಚ್ಚು ಚೆಕ್ಕುಗಳನ್ನು ಬರೆದರೆ ಅದಕ್ಕೆ ಶುಲ್ಕ ನೀಡಬೇಕು; ಕೆಲವು ಬ್ಯಾಂಕುಗಳಲ್ಲಿ ಎ.ಟಿ.ಎಂ ಅಲ್ಲದೇ ಕೌಂಟರಿನಲ್ಲಿ ವ್ಯವಹರಿಸಿದರೆ ಅದಕ್ಕೂ ಶುಲ್ಕವುಂಟು. ಮೂಲತಃ ಯಂತ್ರದಿಂದಾಗುವ ಕೆಲಸವನ್ನು ಯಂತ್ರದ ಕಡೆಗೇ ಅಟ್ಟಿ ಜನಸಂಪರ್ಕ ಕಡಿಮೆ ಮಾಡುತ್ತಲೇ ಲಾಭವನ್ನು ಆರ್ಜಿಸಬೇಕಾದ ಪರಿಸ್ಥಿತಿ ಬ್ಯಾಂಕುಗಳಲ್ಲಿ ಉಂಟಾಗುತ್ತಿದೆ.

ಕೆನಡಾದಲ್ಲಿ ಈ ಮಾತು ನಡೆಯುವುದರಲ್ಲಿ ಒಂದು ಅರ್ಥವೂ ಇರಬಹುದು. ಕಾರಣ ಒಟ್ಟಾರೆ ಜನಸಂಖ್ಯೆಯಲ್ಲಿ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವ ಜನಸಂಖ್ಯೆಯ ಪರಿಮಾಣ ನಮಗಿಂತ ಹೆಚ್ಚೇ. ಆದರೆ ಬ್ಯಾಂಕಿನ ಮುಖವನ್ನೇ ಕಾಣದ ಬಡವರ ಜನಸಂಖ್ಯೆಯಿರುವ ನಮ್ಮ ದೇಶದ ಸವಾಲೇ ಬೇರೆ. ಮೊದಲಿಗೆ ಬ್ಯಾಂಕಿಗೆ ಬರದ ಗ್ರಾಹಕರನ್ನು ಬ್ಯಾಂಕಿನತ್ತ ಕರೆತರಬೇಕು. ಆ ನಂತರ ಅವರಿಗೆ ತಂತ್ರಜ್ಞಾನವನ್ನು ತೋರಿಸಿ ಬ್ಯಾಂಕಿನಿಂದ ಅಟ್ಟಬೇಕು. ಇಲ್ಲವಾದರೆ, ವ್ಯಕ್ತಿಗಳಿರುವ ಬ್ಯಾಂಕಿಗೇ ಬರದಿರುವ ಜನ ಬರೇ ಯಂತ್ರಗಳ ಜೊತೆ ವ್ಯವಹಾರ ನಡೆಸಿಯಾರೇ? ಅಭ್ಯಾಸವಾಗುವವರೆಗೂ ಈ ತಂತ್ರಜ್ಞಾನ [ಯಂತ್ರಜ್ಞಾನ] ಪಿರಿಪಿರಿಯದ್ದೇ. ಮನಸ್ಸಿನ ತುಂಬಾ ಅನುಮಾನಗಳಿಟ್ಟುಕೊಂಡು ಯಂತ್ರಕ್ಕೆ ಹಣ ಉಣ್ಣಿಸಲು ಯಾರೂ ಅದರಲ್ಲೂ ಬಡವರು ಒಪ್ಪುವುದು ಕಷ್ಟದ ಮಾತೇ.

ಹೀಗಾಗಿ ಎಲ್ಲೆಲ್ಲೂ ಏಟಿ‌ಎಂ ಮಯವಾಗುತ್ತಿರುವ ಈ ಘಟ್ಟದಲ್ಲಿ ಹೊಸ ಗ್ರಾಹಕರನ್ನು ಆಕರ್ಷಿಸುವುದು ಹೇಗೆ? ಹಾಗೂ ಅವರೊಡನೆ ವ್ಯವಹರಿಸುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲೇ ಬೇಕಾಗಿದೆ. ಪ್ರತಿ ಗ್ರಾಹಕನೂ ಭಿನ್ನ ಕಾಳಜಿಗಳನ್ನು ಕಳಕಳಿಗಳನ್ನು ಹೊಂದಿ ಬ್ಯಾಂಕಿನತ್ತ ಬರುತ್ತಿದ್ದರೆ ಅವರನ್ನು ಒಳಗೊಂಡು ವ್ಯವಹಾರ ನಡೆಸುವುದು ಹೇಗೆ? ಇದು ಸವಾಲಿನ ವಿಷಯವೇ.

ಈ ಬಗ್ಗೆ ಯೋಚಿಸುತ್ತಿದ್ದಾಗ ಪಶ್ಚಿಮ ಗೋದಾವರಿ ಜಿಲ್ಲೆಯ ಒಂದು ಹಳ್ಳಿಯಲ್ಲಿದ್ದ ಸಹಕಾರ ಸಂಘಕ್ಕೆ ಭೇಟಿನೀಡಿದ ನೆನಪು ನನಗಾಗಿಯಿತು. ಆ ಸಹಕಾರ ಸಂಘದಲ್ಲಿ ಮೊದಲಿಗೆ ಒಂದು ವಾಚನಾಲಯ. ಜನರೆಲ್ಲಾ ಅಲ್ಲಿ ಬಂದು ಪೇಪರ್ ಓದಿ, ಸ್ಥಳೀಯ ರಾಜಕೀಯ ಚರ್ಚಿಸಿ ಹೋಗಬಹುದು. ಜನರಿಗೆ ಹೆಚ್ಚಿನ ಸಮಯವಿದ್ದರೆ ಕಳೆಯಲು ಒಂದು ಅವಕಾಶವನ್ನು ಆ ಸಂಘ ಒದಗಿಸಿಕೊಟ್ಟಿತ್ತು. ಜೊತೆಗೆ ಅಲ್ಲಿನ ಕಾರ್ಯದರ್ಶಿ ನನಗೆ ಹೇಳಿದ್ದೆಂದರೆ, ಜನ ಜಾಸ್ತಿಯಿರುವ ಜಾಗದಲ್ಲಿ ಭ್ರಷ್ಟರಿಗೆ ವ್ಯವಹರಿಸಲೂ ಕಷ್ಟವಾಗುತ್ತದೆ. ಒಂದು ರೀತಿಯಿಂದ ಒಳಗಿನ ಉದ್ಯೋಗಿಗಳಿಗೆ ಈ ಜನ ಕಾವಲಾಗಿಯೂ ಇರುತ್ತಿದ್ದರು. ವ್ಯವಹಾರದ ಮಟ್ಟಿಗೆ ಕೌಂಟರಿಗೆ ಹೋಗಿ ಕೆಲಸ ಮುಗಿಸಿ ಬರುವುದು. ಇದರಿಂದ ಕೌಂಟರೂ ಬಿಡುವಾಗಿರುತ್ತದೆ ಆದರ ಜನರನ್ನು ಇಲ್ಲಿಗೆ ಬರಬೇಡಿ ಎಂದೂ ಹೇಳಿದಂತಾಗುವುದಿಲ್ಲ.

ಬಹುಷಃ ಜನರನ್ನು ಯಂತ್ರಗಳತ್ತ ಕಳಿಸಿ ಕಾಸು ಉಳಿಸಲು ಈ ವ್ಯೂಹ ಉಪಯೋಗವಾದೀತೇನೋ. ಎಲ್ಲರನ್ನೂ ಯಾವುದಾದರೂ ಒಂದು ಆಮಿಷದೊಂದಿಗೆ ಪ್ರಾಂಗಣಕ್ಕೆ ಕರೆಸಿಕೊಳ್ಳಬೇಕು. ಆದರೆ ಅವರಾಗಿಯೇ ಯಂತ್ರಗಳನ್ನು ಉಪಯೋಗಿಸುವಂತೆ ಆಮಿಷಗಳನ್ನೊಡ್ಡಬೇಕು. ಅದು ಬೇಡಲೇ ಬೇಡವೆಂದವರಿಗೆ ಬ್ಯಾಂಕಿನ ಉದ್ಯೋಗಿಯ ಮುಖಚಹರೆಯನ್ನು ಕಾಣಿಸಬಹುದು.... ಆದರೂ ಯಾವಾಗ ಜನರನ್ನು ಮಾತನಾಡಿಸಿ ತುಟ್ಟಿ ವ್ಯವಹಾರವನ್ನು ಮಾಡಬೇಕು, ಯಾವಾಗ ಯಂತ್ರಗಳತ್ತ ಅಟ್ಟಿ ಹಣ ಉಳಿಸಬೇಕು? ಅಥವಾ ಕಾಲ್ ಸೆಂಟರಿನ ಯಂತ್ರಮಾನವರತ್ತ ಯಾವಾಗ ಗ್ರಾಹಕರನ್ನು ಕಳಿಸಬೇಕು ಅನ್ನುವ ದ್ವಂದ್ವ ಎಲ್ಲ ಸಂಸ್ಥೆಗಳನ್ನೂ ಕಾಡುತ್ತಲೇ ಇರುತ್ತದೆ. ಈ ಗಲಾಟೆಯಲ್ಲಿ ಕೌಂಟರಿಗೂ-ಯಂತ್ರದ ಬಳಿಯೂ ಬರದ ಬಡ ಗ್ರಾಹಕರನ್ನು ಬ್ಯಾಂಕುಗಳು ಮರೆತೇ ಬಿಡುವ ಅಪಾಯವೂ ಇದೆ!


No comments:

Post a Comment